ADVERTISEMENT

ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 10:34 IST
Last Updated 13 ಸೆಪ್ಟೆಂಬರ್ 2019, 10:34 IST

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿದೆ.

ಬೆಳ್ತಂಗಡಿ ತಾಲ್ಲೂಕಿನ ನಿಡ್ಲೆ ಗ್ರಾಮದ ಶೇಖರ ನಲಿಕೆ (45) ಶಿಕ್ಷೆಗೆ ಒಳಗಾದ ಆರೋಪಿ.

ಆರೋಪಿ ಶೇಖರ ನಲಿಕೆ ನಾಟಿ ವೈದ್ಯನಾಗಿದ್ದು, 2016ರ ಮೇ 28ರಂದು ಆತನ ಮನೆಗೆ ವ್ಯಕ್ತಿಯೊಬ್ಬರನ್ನು ಮದ್ಯಪಾನ ಚಟ ಬಿಡಿಸುವುದಕ್ಕಾಗಿ ಅವರ ಪತ್ನಿ ಮತ್ತು 13 ವರ್ಷದ ಪುತ್ರಿ ಕರೆದುಕೊಂಡು ಬಂದಿದ್ದರು.

ADVERTISEMENT

ಔಷಧಿ ನೀಡಿದ ಬಳಿಕ ಅವರ ಪುತ್ರಿಯನ್ನು ನೋಡಿದ ಶೇಖರ ನಲಿಕೆ ‘ಆಕೆಗೆ ಸೋಂಕು ಇದೆ. ತಾಯಿತ ಕಟ್ಟಬೇಕು. ನೀವು ಹೊರಗೆ ಹೋಗಿ’ ಎಂದು ಆಕೆಯ ತಂದೆ ಮತ್ತು ತಾಯಿಯನ್ನು ಹೊರಗೆ ಕಳುಹಿಸಿದ್ದ. ತಂದೆ ಮತ್ತು ತಾಯಿ ಹೊರಗೆ ಕಾಯುತ್ತಿದ್ದು, ಸ್ವಲ್ಪ ಹೊತ್ತಿನಲ್ಲಿ ಅವರ ಪುತ್ರಿ ಅಳುತ್ತಾ ಹೊರಗೆ ಬಂದಿದ್ದಳು. ಪಾಲಕರು ವಿಚಾರಿಸಿದಾಗ, ಶೇಖರ ನಲಿಕೆ ತನಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ತಿಳಿಸಿದ್ದಳು. ಆಕೆಯ ತಂದೆ ಮತ್ತು ತಾಯಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು, ಅದೇ ದಿನ ಆರೋಪಿಯನ್ನು ಬಂಧಿಸಿದ್ದರು. ಬೆಳ್ತಂಗಡಿ ಇನ್‌ಸ್ಪೆಕ್ಟರ್ ನೇಮಿರಾಜು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಅವರು, ಆರೋಪಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿ, ಆದೇಶಿಸಿದ್ದಾರೆ. ₹10 ಸಾವಿರ ದಂಡದ ಮೊತ್ತದಲ್ಲಿ ₹ 9 ಸಾವಿರವನ್ನು ಸಂತ್ರಸ್ತ ಬಾಲಕಿಗೆ ಪಾವತಿಸುವಂತೆ ಆದೇಶಿಸಲಾಗಿದೆ. ಸರ್ಕಾರದಿಂದಲೂ ಆಕೆಗೆ ಪರಿಹಾರ ದೊರಕಿಸಿ ಕೊಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ.

ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ಸರ್ಕಾರದ ಪರವಾಗಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.