ಬೆಂಗಳೂರು: ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವ ವೇಳೆ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಪರಿಹಾರ ರೂಪದಲ್ಲಿ ₹5 ಲಕ್ಷ ನೀಡುವಂತೆ ಓಲಾ ಕ್ಯಾಬ್ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ನೀಡಿರುವ ದೂರಿನ ಕುರಿತು ತನಿಖೆ ನಡೆಸಲು ಕಂಪನಿಯ ಆಂತರಿಕ ದೂರು ಸಮಿತಿಗೆ ನಿರ್ದೇಶಿಸಬೇಕು’ ಎಂದು ಕೋರಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
‘ಸಂತ್ರಸ್ತೆಗೆ ವ್ಯಾಜ್ಯ ವೆಚ್ಚವಾಗಿ ಹೆಚ್ಚುವರಿ ₹5 ಲಕ್ಷ ಮೊತ್ತವನ್ನು ಕಂಪನಿ ಪಾವತಿಸಬೇಕು. ಸಂತ್ರಸ್ತೆ ನೀಡಿದ ದೂರಿನ ಕುರಿತು ಕಂಪನಿಯ ಆಂತರಿಕ ದೂರುಗಳ ಸಮಿತಿ ವಿಚಾರಣೆ ನಡೆಸಬೇಕು. ಆ ವಿಚಾರಣಾ ಪ್ರಕ್ರಿಯೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ಬೆಂಗಳೂರು ನಗರ ಜಿಲ್ಲಾಧಿಕಾರಿ ಸಮಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ನ್ಯಾಯಪೀಠ ಸೂಚಿಸಿದೆ.
‘ನಾನು 2019ರಲ್ಲಿ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಚಾಲಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಚಾಲಕನ ವಿರುದ್ಧ ಕ್ರಮ ಜರುಗಿಸಿ’ ಎಂದು ಕೋರಿ ಸಂತ್ರಸ್ತೆಯು ಎಎನ್‌ಐ ಟೆಕ್ನಾಲಜೀಸ್‌ಗೆ ದೂರು ನೀಡಿದ್ದರು. ‘ಆಂತರಿಕ ದೂರುಗಳ ಸಮಿತಿಯು ನಿಮ್ಮ ದೂರನ್ನು ಪರಿಗಣಿಸಿ ಅದರ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ಹೊಂದಿಲ್ಲ’ ಎಂದು ಕಂಪನಿ ಸಂತ್ರಸ್ತೆಗೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಮ್ಮ ಅಧಿಕಾರವಧಿ ಮೊಟಕುಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ’ ಅಧ್ಯಕ್ಷ ಶಾಂತ್ ಎ. ತಿಮ್ಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ತಿಮ್ಮಯ್ಯ ತಮ್ಮ ಅಧಿಕಾರವಧಿ ಪೂರೈಸಲು ಹಸಿರು ನಿಶಾನೆ ತೋರಿದೆ.
ಈ ಸಂಬಂಧ ಶಾಂತ್ ಎ.ತಿಮ್ಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ಪ್ರಕಟಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ಶಿವಕುಮಾರ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.