ADVERTISEMENT

ಅಮಿತ್‌ ಶಾ ಎದುರು ಅಸಮಾಧಾನಿತರ ದೂರು

ರಾಜ್ಯದ ಹಂತದಲ್ಲೇ ಬಗೆಹರಿಸಿಕೊಳ್ಳಲು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 16:15 IST
Last Updated 17 ಜನವರಿ 2021, 16:15 IST
   

ಬೆಳಗಾವಿ: ‘ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದಿರುವುದರಿಂದ ಉಂಟಾಗಿರುವ ಅಸಮಾಧಾನ ಸೇರಿದಂತೆ ಜಿಲ್ಲಾ, ರಾಜ್ಯಮಟ್ಟದ ವಿಚಾರಗಳನ್ನು ಇಲ್ಲಿಯೇ ಬಗೆಹರಿಸಿಕೊಳ್ಳಬೇಕು. ಎಲ್ಲವನ್ನೂ ನಮ್ಮ ಬಳಿಗೆ ತರಬೇಡಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಾಸಕರು ಮತ್ತು ‍ಪದಾಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಕೆಎಲ್‌ಇ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅಸಮಾಧಾನಿತರು ಅಹವಾಲು ಮಂಡಿಸಿದಾಗ ಮೇಲಿನಂತೆ ಪ್ರತಿಕ್ರಿಯಿಸಿದ ಶಾ, ‘ಮುಖ್ಯಮಂತ್ರಿ, ರಾಜ್ಯ ಘಟಕದ ಅಧ್ಯಕ್ಷರು ಇದೆಲ್ಲವನ್ನೂ ಪರಿಹರಿಸಬೇಕು. ಅಲ್ಲೂ ಸಾಧ್ಯವಾಗದಿದ್ದರೆ ಉಸ್ತುವಾರಿ ಇರುತ್ತಾರೆ. ಅವರೊಂದಿಗೆ ಸಮಾಲೋಚಿಸಬೇಕು. ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಮುಜುಗರ ಉಂಟು ಮಾಡಬಾರದು’ ಎಂದು ಕಿವಿಮಾತು ಹೇಳಿದ್ದಾರೆ.

ಜನ‍ಪ್ರತಿನಿಧಿಗಳು ಸೇರಿದಂತೆ ಈ ಭಾಗದ 200ಕ್ಕೂ ಹೆಚ್ಚಿನ ಪದಾಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ, ‘ಪಕ್ಷದ ಸಿದ್ಧಾಂತವನ್ನು ಬಿಡಬಾರದು. ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನವಿದ್ದರೆ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಬೇಕು. ಎಲ್ಲರ ಅಭಿಪ್ರಾಯಗಳನ್ನೂ ಆಲಿಸಲು ಪಕ್ಷದ ವ್ಯವಸ್ಥೆಗಳಿವೆ. ಅದಕ್ಕೆಂದೆ ಹಲವರಿಗೆ ಜವಾಬ್ದಾರಿ ನೀಡಲಾಗಿದೆ. ಜನಪ್ರತಿನಿಧಿಗಳು ಕಾರ್ಯಕರ್ತರಿಗೆ ಮಹತ್ವ ಕೊಡಬೇಕು. ಅವರ ಭಾವನೆಗಳನ್ನು ಆಲಿಸಬೇಕು. ಮುಂಬರುವ ಚುನಾವಣೆಗಳಿಗೆ ಸಂಘಟನೆ ಬಲಪಡಿಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

‘ನಮ್ಮದು ಭಿನ್ನವಾದ ಪಕ್ಷ. ಸಂಘಟನೆ ಯಾರಿಗೂ ಶರಣಾಗಬಾರದು. ಕುಟುಂಬ ರಾಜಕಾರಣ, ಹಣ ಮತ್ತು ತೋಳ್ಬಲ ಮೀರಿ ಸಂಘಟನೆ ಬೆಳೆಯಬೇಕು. ಪಕ್ಷ ದುರ್ಬಲವಾದರೆ ಬೇರೆಯವರು ನಿಮ್ಮ ಮೇಲೆ ಸವಾರಿ ಮಾಡುತ್ತಾರ. ಅದಕ್ಕೆ ಅವಕಾಶ ಕೊಡಬಾರದು’ ಎಂದು ನಿರ್ದೇಶನ ನೀಡಿದರು ಎಂದು ಮೂಲಗಳು ತಿಳಿಸಿವೆ.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಹಲವರು ಆಕಾಂಕ್ಷಿಗಳಿರುವುದು ಪ್ರಸ್ತಾಪವಾಯಿತು. ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ತೀರ್ಮಾನವಾಗಲಿಲ್ಲ. ಆದರೆ, ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಕೊಡಬಾರದು. ಹೊಸ ಪ್ರಯೋಗ ನಡೆದಲ್ಲಿ ಅದಕ್ಕೂ ಸಿದ್ಧವಾಗಬೇಕು ಎಂಬ ಸೂಚನೆಯನ್ನು ಸೂಚ್ಯವಾಗಿ ನೀಡಿದ್ದಾರೆ’ ಎಂದು ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವು ಶಾಸಕರು, ಪಕ್ಷ ನಿಷ್ಠರಾದ ತಮಗೆ ಸಂಪುಟದಲ್ಲಿ ಅವಕಾಶ ಸಿಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಪಕ್ಷದ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಈ ಭಾಗದ ನಾಯಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.