ADVERTISEMENT

ದಟ್ಟಾರಣ್ಯದಲ್ಲಿ ಶರಾವತಿ ಯೋಜನೆ ಏಕೆ?: 11 ವಿಷಯಗಳ ವಿವರಣೆ ಕೇಳಿದ ಅರಣ್ಯ ಸಚಿವಾಲಯ

ಮಂಜುನಾಥ್ ಹೆಬ್ಬಾರ್‌
Published 26 ಮೇ 2025, 23:30 IST
Last Updated 26 ಮೇ 2025, 23:30 IST
<div class="paragraphs"><p>ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಬಳಿಯ ಶರಾವತಿ ಕಣಿವೆಯ ನಯನಮನೋಹನ ದೃಶ್ಯ.<br></p></div>

ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಬಳಿಯ ಶರಾವತಿ ಕಣಿವೆಯ ನಯನಮನೋಹನ ದೃಶ್ಯ.

   

ನವದೆಹಲಿ: ದಟ್ಟ ಹಾಗೂ ಅತಿ ದಟ್ಟ ಅರಣ್ಯದಲ್ಲೇ ₹8 ಸಾವಿರ ಕೋಟಿ ಯೋಜನಾ ವೆಚ್ಚದ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಅನುಷ್ಠಾನಗೊಳಿ ಸಲು ಕರ್ನಾಟಕ ಸರ್ಕಾರ ಮುಂದಾಗಿರು ವುದು ಏಕೆ ಎಂದು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ತಕರಾರು ಎತ್ತಿದೆ. 

ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಶರಾವತಿ ವನ್ಯಜೀವಿಧಾಮದ 134 ಎಕರೆ ಕಾಡು ಬಳಸಲು ಅನುಮತಿ ಕೇಳಿ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಸಚಿವಾಲಯವು 11 ವಿಷಯಗಳಲ್ಲಿ ವಿವರಣೆ ಕೇಳಿದೆ. 

ADVERTISEMENT

‘ಯೋಜನೆಗೆ 3 ಅರಣ್ಯ ವಲಯಗಳಲ್ಲಿ ಕಾಡು ಬಳಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಎಲ್ಲ ವಿಭಾಗಗಳಲ್ಲಿ ಸಸ್ಯವರ್ಗದ ಸಾಂದ್ರತೆ 0.1ರಿಂದ 0.7ರ ವರೆಗೆ ಇದೆ’ ಎಂದು ಸಚಿವಾಲಯ ಹೇಳಿದೆ.

‘ನಾವು ನಡೆಸಿದ ವಿಶ್ಲೇಷಣೆಯ ಪ್ರಕಾರ, ಪ್ರಸ್ತಾವಿತ ಅರಣ್ಯ ಪ್ರದೇಶವು ಹೆಚ್ಚಿನ ಸಂರಕ್ಷಣಾ ಮೌಲ್ಯದ  ವಲಯದಲ್ಲಿ ಬರುತ್ತದೆ. ಅತೀ ದಟ್ಟ ಕಾಡು ಬಳಸುತ್ತಿರುವ ಬಗ್ಗೆ ರಾಜ್ಯ ಸೂಕ್ತ ಸಮರ್ಥನೆ ನೀಡಬೇಕು’ ಎಂದು ಸಚಿವಾಲಯ ತಾಕೀತು ಮಾಡಿದೆ. 

‘ಯೋಜನೆಯ ಸುಲಲಿತ ಅನುಷ್ಠಾನಕ್ಕೆ ಸೂಕ್ತವಾದ ಜಾಗವನ್ನೇ ಆಯ್ಕೆ ಮಾಡಲಾಗಿದೆ. ಇಲ್ಲಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಬೇಕಾದ ಅಗತ್ಯ ಮೂಲಸೌಕರ್ಯಗಳು ಇವೆ’ ಎಂದು ರಾಜ್ಯ ಸರ್ಕಾರ ಸಮಜಾಯಿಷಿ ನೀಡಿದೆ. ತಳಕಳಲೆ ಮತ್ತು ಗೇರುಸೊಪ್ಪ ಜಲಾಶಯಗಳು ಇರುವುದರಿಂದ ಹೊಸ ಅಣೆಕಟ್ಟೆ ನಿರ್ಮಾಣದ ಅಗತ್ಯವೇ ಇಲ್ಲ. ರಸ್ತೆಗಳು ಹಾಗೂ ಕಚೇರಿಗಳು ಇರುವುದರಿಂದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅರಣ್ಯ ಬಳಸಬೇಕಿಲ್ಲ. ಇಲ್ಲಿ ಪ್ರತಿನಿತ್ಯ 120 ಕೋಟಿ ಯೂನಿಟ್‌ ಟನ್‌ ವಿದ್ಯುತ್ ಸಂಗ್ರಹ ಮಾಡಬಹುದು’ ಎಂದೂ ತಿಳಿಸಿದೆ. 

ಯೋಜನೆಗೆ 54 ಹೆಕ್ಟೇರ್‌ (134 ಎಕರೆ) ಅರಣ್ಯ ಬಳಸಲಾಗುತ್ತಿದೆ. ಇದರಲ್ಲಿ 20 ಹೆಕ್ಟೇರ್ ಅರಣ್ಯವು ನೀರು ವಾಹಕ ವ್ಯವಸ್ಥೆಗೆ ಬಳಕೆಯಾಗಲಿದೆ. ಇದನ್ನು ನೆಲಮಟ್ಟದಿಂದ 50ರಿಂದ 430 ಮೀಟರ್ ಆಳದಲ್ಲಿ ನಿರ್ಮಿಸಲಾ ಗುತ್ತದೆ. ಇದರಿಂದ, ಅರಣ್ಯಕ್ಕೆ ಭಾರಿ ಹಾನಿ ಆಗುವುದಿಲ್ಲ ಎಂದು ರಾಜ್ಯ
ಸ್ಪಷ್ಟಪಡಿಸಿದೆ. ಮೇಲಿನ ಹಾಗೂ ಕೆಳಗಿನ ಜಲಾಶಯಗಳನ್ನು ಸಂಪರ್ಕಿಸಲು ಪರ್ಯಾಯ ಮಾರ್ಗಗಳ ಬಗ್ಗೆಯೂ ಅಧ್ಯಯನ ನಡೆಸಲಾಗಿತ್ತು. ಹೆಚ್ಚಿನ ಕಾಡು ಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಪ್ರಸ್ತಾವ ಕೈಬಿಡಲಾಗಿತ್ತು’ ಎಂದೂ ಹೇಳಿದೆ. 

ಹುಲಿ ಕಾರಿಡಾರ್‌ನಲ್ಲಿ ಯೋಜನೆ

‘ರಾಜ್ಯ ಸರ್ಕಾರ ಒದಗಿಸಿದ ಮಾಹಿತಿಯ ಪ್ರಕಾರ, ಶರಾವತಿ ಕಣಿವೆಯ ಸಿಂಹ ಬಾಲದ ಸಿಂಗಳೀಕ ಅಭಯಾರಣ್ಯ ಮತ್ತು ಪರಿಸರ ಸೂಕ್ಷ್ಮ ಪ್ರದೇಶದ ಕಾಡನ್ನು ಯೋಜನೆಗೆ ಉಪಯೋಗಿಸಲಾಗುತ್ತದೆ. ಆದಾಗ್ಯೂ, ನಮ್ಮ ವಿಶ್ಲೇಷಣೆಯ ಪ್ರಕಾರ, ಪ್ರಸ್ತಾವಿತ ಅರಣ್ಯ ಪ್ರದೇಶವು ದಾಂಡೇಲಿ ಶರಾವತಿ ಹುಲಿ ಕಾರಿಡಾರ್ ಮೂಲಕ ಹಾದುಹೋಗುತ್ತಿದೆ. ಶರಾವತಿ ವನ್ಯಜೀವಿಧಾಮದಿಂದ 1.95 ಕಿ.ಮೀ ಮತ್ತು ಅಘನಾಶಿನಿ ಸಿಂಗಳೀಕ ಅಭಯಾರಣ್ಯದ ಮೀಸಲು ಪ್ರದೇಶದಿಂದ 9.25 ಕಿ.ಮೀ ದೂರದಲ್ಲಿದೆ. ಈ ಬಗ್ಗೆ ರಾಜ್ಯ ವಿವರಣೆ ನೀಡಬೇಕು. ಜತೆಗೆ, ವನ್ಯಜೀವಿ ಅನುಮೋದನೆ ಪ್ರಸ್ತಾವ ಯಾವ ಹಂತದಲ್ಲಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸಚಿವಾಲಯ ಸೂಚಿಸಿದೆ. 

‘ಶರಾವತಿ ವನ್ಯಜೀವಿಧಾಮ, ಅಘನಾಶಿನಿ ಸಿಂಗಳೀಕ ಅಭಯಾರಣ್ಯ, ಹೊನ್ನಾವರ ಹಾಗೂ ಸಾಗರ ಆಸುಪಾಸಿನ ಅರಣ್ಯಗಳನ್ನು ಸೇರಿಸಿ ಶರಾವತಿ ಸಿಂಹ ಬಾಲದ ಸಿಂಗಳೀಕ ಅಭಯಾರಣ್ಯವೆಂದು 2019ರಲ್ಲೇ ಅಧಿಸೂಚನೆ ಹೊರಡಿಸಲಾಗಿದೆ. ಈ ಪ್ರದೇಶವು 930 ಚದರ ಕಿ.ಮೀ. ಒಳಗೊಂಡಿದೆ. ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ಶರಾವತಿ ಸಿಂಗಳೀಕ ಅಭಯಾರಣ್ಯದ ಕಾಡು ಬಳಕೆಯಾಗಲಿದೆ’ ಎಂದು ರಾಜ್ಯ ಸ್ಪಷ್ಟಪಡಿಸಿದೆ. 

ನದಿ ತಿರುವು ಇಲ್ಲ
‘ಪ್ರಸ್ತಾವಿತ ಯೋಜನೆ ಮತ್ತು ಜಲಾಶಯದಿಂದಾಗಿ ನದಿಯ ಜಲಚರ ಪ್ರಾಣಿ ಪ್ರಭೇದಗಳ ಮೇಲೆ ಉಂಟಾಗುವ ಪರಿಣಾಮದ ಕುರಿತು ಯಾವುದೇ ಅಧ್ಯಯನ ಮಾಡಲಾಗಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಸಚಿವಾಲಯ ಪ್ರಶ್ನಿಸಿದೆ. ‘ಈ ಯೋಜನೆಗೆ ಯಾವುದೇ ನದಿಯನ್ನು ತಿರುಗಿಸು ವುದಿಲ್ಲ. ಈಗಿರುವ ಎರಡು ಜಲಾಶಯಗಳನ್ನು ಸಂಪರ್ಕಿಸಲು ಭೂಗತ ನೀರು ವಾಹಕ ವ್ಯವಸ್ಥೆ ನಿರ್ಮಿಸಲಾಗುತ್ತದೆ’ ಎಂದು ರಾಜ್ಯ ವಿವರಣೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.