ADVERTISEMENT

ಶಿವಮೊಗ್ಗ: ದುಡ್ಡು ಕೊಟ್ಟರೆ ಬಯಲಿಗೂ ಲೇಔಟ್ ಸ್ಥಾನ..!

ಕೋರ್ಟ್ ಮೆಟ್ಟಿಲೇರಿದ ‘ಸೂಡಾ’ ವ್ಯಾಪ್ತಿಯ ಖಾಸಗಿ ಲೇಔಟ್‌ಗಳ ಪ್ರಕರಣ

ಚಂದ್ರಹಾಸ ಹಿರೇಮಳಲಿ
Published 28 ನವೆಂಬರ್ 2018, 20:26 IST
Last Updated 28 ನವೆಂಬರ್ 2018, 20:26 IST
ಶಿವಮೊಗ್ಗ ನಗರಪಾಲಿಕೆ ವ್ಯಾಪ್ತಿಯ ಚಿಕ್ಕಲ್‌ ಬಳಿ ಮೂಲಸೌಕರ್ಯ ಇಲ್ಲದ ಲೇಔಟ್‌ನಲ್ಲಿ ನಿವೇಶನ ಖರೀದಿದಾರರು ಮನೆ ಕಟ್ಟುತ್ತಿದ್ದಾರೆ
ಶಿವಮೊಗ್ಗ ನಗರಪಾಲಿಕೆ ವ್ಯಾಪ್ತಿಯ ಚಿಕ್ಕಲ್‌ ಬಳಿ ಮೂಲಸೌಕರ್ಯ ಇಲ್ಲದ ಲೇಔಟ್‌ನಲ್ಲಿ ನಿವೇಶನ ಖರೀದಿದಾರರು ಮನೆ ಕಟ್ಟುತ್ತಿದ್ದಾರೆ   

ಶಿವಮೊಗ್ಗ:ಮೂಲಸೌಕರ್ಯ ಕಲ್ಪಿಸದಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಲೇಔಟ್‌ಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರ ಅಂತಿಮ ಅನುಮೋದನೆ ನೀಡಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಶಿವಮೊಗ್ಗ ಸುತ್ತಮುತ್ತ ನಿವೇಶನ ಖರೀದಿಸಿದ ಸಾವಿರಾರು ನಾಗರಿಕರು ರಸ್ತೆ, ಒಳಚರಂಡಿ, ವಿದ್ಯುತ್, ನೀರಿನ ಸೌಲಭ್ಯಗಳಿಲ್ಲದೆ ಮನೆ ಕಟ್ಟಲು ಪರದಾಡುತ್ತಿದ್ದಾರೆ.

ಕೆಲವು ಲೇಔಟ್‌ಗಳಲ್ಲಿ ನಿವೇಶನ ಗುರುತಿಸಲು ಆಕಾರ ಕಲ್ಲುಗಳನ್ನು ನೆಟ್ಟಿಲ್ಲ. ನಿವೇಶನ ಸಂಖ್ಯೆ ನಮೂದಿಸಿಲ್ಲ. ಇಂಥಾ ಬಯಲುಗಳಲ್ಲೇ ತಮ್ಮ ನಿವೇಶನಗಳನ್ನು ಪತ್ತೆ ಹಚ್ಚುವ ಸಾಹಸಕ್ಕೆ ನಾಗರಿಕರು ಇಳಿಯಬೇಕಿದೆ.

ADVERTISEMENT

ಹಲವರು ಮಾಹಿತಿ ಹಕ್ಕಿನ ಅಡಿಅರ್ಜಿ ಸಲ್ಲಿಸಿದ್ದು, ಪ್ರಾಧಿಕಾರ ನೀಡಿದ ದಾಖಲೆಗಳಲ್ಲಿ ಇಂತಹ ಲೇಔಟ್‌ಗಳು ಸಕಲ ಮೂಲ ಸೌಕರ್ಯ ಹೊಂದಿವೆ ಎಂದು ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಷರಾ ಬರೆದಿದ್ದಾರೆ. ಖಾಸಗಿ ಲೇಔಟ್‌ ಮಾಲೀಕರು, ಮಧ್ಯವರ್ತಿಗಳು ಹಾಗೂ ಪ್ರಾಧಿಕಾರದ ಕಚೇರಿಗೆ ಅಲೆದಲೆದು ಸುಸ್ತಾದ ನಿವೇಶನಗಳ ಖರೀದಿದಾರರು ಅಂತಿಮ ಪ್ರಯತ್ನವಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಅಲ್ಲೇ ನಿಂತ ಮೂರನೇ ಹಂತ: ವರ್ಷದ ಹಿಂದಿನವರೆಗೂ ಖಾಸಗಿ ಲೇಔಟ್‌ಗಳ ನಿವೇಶನವನ್ನು ಮೂರು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಭೂಪರಿವರ್ತನೆಯಾಗಿ ಮೂಲಸೌಕರ್ಯ ಕಾಮಗಾರಿ ಆರಂಭಿಸುವ ಹಂತದಲ್ಲಿ ಶೇ 40ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ನಂತರ ಎರಡನೇ ಹಂತದಲ್ಲಿ ಶೇ 30ರಷ್ಟು ನಿವೇಶನಗಳು ದೊರಕುತ್ತಿದ್ದವು.

ಕೊನೆಯದಾಗಿ ಮೆಸ್ಕಾಂ, ಲೋಕಪಯೋಗಿ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಿದ ನಂತರ ಸಂಪೂರ್ಣ ಸೌಕರ್ಯ ಇರುವುದನ್ನು ಖಾತ್ರಿಪಡಿಸಿಕೊಂಡು ಉಳಿದ ಎಲ್ಲ ನಿವೇಶನಗಳನ್ನು ಪ್ರಾಧಿಕಾರ ಬಿಡುಗಡೆ ಮಾಡುತ್ತಿತ್ತು.

ಈ ನಿಯಮಗಳನ್ನು ದುರುಪಯೋಗಪಡಿಸಿಕೊಂಡ ಕೆಲವು ಲೇಔಟ್‌ ಮಾಲೀಕರು ಎರಡು ಹಂತಗಳಲ್ಲಿ ದೊರಕುವ ಶೇ 70ರಷ್ಟು ನಿವೇಶನಗಳನ್ನು ಖರೀದಿದಾರರಿಗೆ ಮಾರಾಟ ಮಾಡಿ, ಮೂರನೇ ಹಂತ ನಿರ್ಲಕ್ಷ್ಯ ಮಾಡುವ ಮೂಲಕ ವಂಚಿಸಿರುವುದೂ ದಾಖಲೆಗಳಿಂದ ಬಹಿರಂಗವಾಗಿದೆ.

**

ನಿಯಮದಂತೆ ಬಾಕಿ ನಿವೇಶನ ಹರಾಜು ಹಾಕಿ, ಬಂದ ಹಣದಿಂದ ಮೂಲಸೌಕರ್ಯ ಕಲ್ಪಿಸಬಹುದು. ಆದರೆ, ಪ್ರಾಧಿಕಾರ ನೋಟಿಸ್‌ ನೀಡಿ ಸುಮ್ಮನಾಗಿದೆ.

–ಸೌಮ್ಯಾ ಮಾರುತಿ, ಮೋಸಹೋಗಿರುವ ಖರೀದಿದಾರರು

**

ರಾಜ್ಯದಲ್ಲಿ ಎಲ್ಲಿಯೂ ಬಾಕಿ ನಿವೇಶನ ಹರಾಜು ಪ್ರಕ್ರಿಯೆ ನಡೆಸಿಲ್ಲ. ಮೂಲ ಸೌಕರ್ಯ ಕಲ್ಪಿಸದ ಲೇಔಟ್‌ಗಳ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು.

–ಮೂಕಪ್ಪ ಕರಭೀಮಣ್ಣನವರ್, ಆಯುಕ್ತ, ‘ಸೂಡಾ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.