ADVERTISEMENT

ಕಡೇಪಕ್ಷ ಗುಂಡಿಯನ್ನಾದರೂ ಮುಚ್ಚಿ: ಹದಗೆಟ್ಟ ಶಿರಾಡಿ ಘಾಟಿ ರಸ್ತೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 20:28 IST
Last Updated 2 ಜೂನ್ 2022, 20:28 IST
ಗುಂಡಿ ಬಿದ್ದಿರುವ ಶಿರಾಡಿ ಘಾಟಿಯ ರಸ್ತೆ
ಗುಂಡಿ ಬಿದ್ದಿರುವ ಶಿರಾಡಿ ಘಾಟಿಯ ರಸ್ತೆ   

ಹಾಸನ: ‘ಬೆಂಗಳೂರಿಂದ ಆಗಾಗ ಧರ್ಮಸ್ಥಳಕ್ಕೆ ಬರ್ತಾ ಇರ್ತಿವಿ. ಹಾಸನವರೆಗೂ ರಸ್ತೆ ಸರಿಯಾಗಿದೆ. ಹಾಸನದಿಂದ ಶಿರಾಡಿ ಘಾಟಿ ಇಳಿಯುವವರೆಗೂ ನಮ್ಮ ಪಾಡು ಹೇಳತೀರದು. ರಸ್ತೆಯಲ್ಲಿ ಕನಿಷ್ಠ ಗುಂಡಿಯನ್ನಾದರೂ ಮುಚ್ಚಿದರೆ ಜೀವ ಉಳಿಯುತ್ತದೆ.’

ಟಿಟಿ ವಾಹನದಲ್ಲಿ ಪ್ರವಾಸಕ್ಕೆ ಹೊರಟಿದ್ದ ಬೆಂಗಳೂರಿನ ಮುನಿಯಪ್ಪ ಹೀಗೆ ಹೇಳಿ ವಿಷಾದದ ನಗೆ ನಕ್ಕರು. ‘ಗುಂಡಿಗಳು ತುಂಬಿದ ರಸ್ತೆಯಲ್ಲಿ ಪ್ರಯಾಣಿಸುವುದೇ ಕಷ್ಟಕರ. ಗುಂಡಿ ತಪ್ಪಿಸಲು ಸ್ವಲ್ಪ ಆಚೀಚೆ ಸರಿದರೂ ಧರ್ಮಸ್ಥಳದ ಮಂಜುನಾಥನೇ ಕಾಪಾಡಬೇಕು’ ಎಂದು ಹೇಳಿದರು.

ಹಾಸನದ ಬೈಪಾಸ್‌ನಿಂದ ಸಕಲೇಶಪುರದ ಹೆಗ್ಗದ್ದೆಯವರೆಗೆ 45ಕಿ.ಮೀ. ಅಂತರದ ರಸ್ತೆ ಕಾಮಗಾರಿಯನ್ನು ₹ 700 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, 6 ವರ್ಷ ಕಳೆದರೂ ಕಾಮಗಾರಿ ಕುಂಟುತ್ತ ಸಾಗಿರುವುದು ಪ್ರಯಾಣಿಕರನ್ನು ಕಂಗೆಡಿಸಿದೆ.

ADVERTISEMENT

‘ಈ ರೂಟ್‌ನಲ್ಲಿ ಡ್ಯೂಟಿ ಮಾಡೋದಂದ್ರೆ ಪನಿಷ್‌ಮೆಂಟ್ ಇದ್ಹಂಗೆ. ದೋಣಿಗಲ್‌ ಮತ್ತು ಮಾರನಹಳ್ಳಿ ಮಧ್ಯೆ 10 ಕಿ.ಮೀ.ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ದಾರಿನೇ ಸಾಗಲ್ಲ. ಹೊಂಡ, ಗುಂಡಿಗಳನ್ನು ತಪ್ಪಿಸಿ ಬಸ್‌ ಓಡಿಸುವುದು ಪ್ರಯಾಸಕರ. ಈ ರೂಟ್‌ನಲ್ಲಿ ಒಮ್ಮೆ ಹೋಗಿ ಬಂದ್ರೆ, ಬಸ್ ದುರಸ್ತಿ ಆಗಲೇಬೇಕು. ನಮಗಂತೂ ಸಾಕಾಗಿ ಹೋಗಿದೆ’ ಎನ್ನುವುದು ಕೆಎಸ್‌ಆರ್‌ಟಿಸಿ ಚಾಲಕರೊಬ್ಬರ ಅಳಲು.

‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2016-17ನೇ ಸಾಲಿನಲ್ಲಿ ಆರಂಭಗೊಂಡಿದೆ. 47 ಕಿ.ಮೀ. ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ಕಳಪೆ ಗುಣಮಟ್ಟದ್ದಾಗಿದೆ. ಸ್ಥಳೀಯ ಶಾಸಕರೂ ನಿರ್ಲಕ್ಷ್ಯ ವಹಿಸಿರು
ವುದು ಶಂಕೆ ಮೂಡಿಸಿದೆ. ಕೂಡಲೇ ಕಾಮಗಾರಿ ಚುರುಕುಗೊಳಿಸದಿದ್ದರೆ ಜೂನ್‌ 13ರ ನಂತರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಸಿ.ಸಣ್ಣಸ್ವಾಮಿ.

ಇನ್ನು ಚಾರ್ಮಾಡಿಯ ಮೂಲಕ ಪ್ರಯಾಣಿಸುವುದೂ ದುಸ್ತರ. ಹಾಸನ ಜಿಲ್ಲೆಯ ಬೇಲೂರು ವ್ಯಾಪ್ತಿಯಲ್ಲಿ ರಸ್ತೆ ಸರಿಯಾಗಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಚಾರ್ಮಾಡಿ ಘಾಟಿಯ ರಸ್ತೆಯ ಹದಗೆಟ್ಟಿದೆ. ಈ ರಸ್ತೆಯಲ್ಲಿ ಲಘು ವಾಹನಗಳಿಗಷ್ಟೇ ಅವಕಾಶವಿದ್ದು, ಭಾರಿ ವಾಹನಗಳ ಸಂಚಾರ ನಿರ್ಬಂಧವಿದೆ. ಹಾಗಾಗಿ ಸರಕು ಸಾಗಣೆ ಲಾರಿಗಳು ಶಿರಾಡಿ ಮೂಲಕವೇ
ಸಂಚರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.