ADVERTISEMENT

ಶೀರೂರು ಪೀಠಾಧಿಪತಿ ನೇಮಕ: ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 20:18 IST
Last Updated 2 ಜೂನ್ 2021, 20:18 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಉಡುಪಿಯ ಶೀರೂರು ಮಠದ ನೂತನ ಪೀಠಾಧಿಪತಿಯನ್ನಾಗಿ ಅಪ್ರಾಪ್ತರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಉಡುಪಿ ಜಿಲ್ಲಾಡಳಿತಕ್ಕೆ ನೋಟಿಸ್ ನೀಡಲುಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಎಲ್ಲಾ ಪ್ರತಿವಾದಿಗಳ ವಿಚಾರಣೆ ನಡೆಸಿದ ಬಳಿಕವೇ ಮಧ್ಯಂತರ ಆದೇಶದ ಮನವಿ ಪರಿಗಣಿಸಲಾಗುವುದು’ ಎಂದು ತಿಳಿಸಿತು. ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿತು.

‘ಅಪ್ರಾಪ್ತರನ್ನು ಮಠಾಧಿಪತಿ ಮಾಡುವ ಮೂಲಕ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ.18 ವರ್ಷ ತುಂಬುವ ತನಕ ಸ್ವತಂತ್ರವಾಗಿ ನಿರ್ಧಾರ ಕೈಗೊಂಡಿದ್ದರೂ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಪೊಷಕರು ಕೂಡ ತಮ್ಮ ಮಗನ ಮೇಲೆ ಸನ್ಯಾಸ ಹೇರಲು ಅಧಿಕಾರ ಇಲ್ಲ’ ಎಂದು ಪಿ. ಲಾತವ್ಯ ಆಚಾರ್ಯ ಹಾಗೂ ಇತರರು ಅರ್ಜಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೂ ತಿಳಿಸಲಾಗಿದೆ. ಬಾಲಕನ ಶೈಕ್ಷಣಿಕ ಭವಿಷ್ಯ ಮತ್ತು ಇತರ ಹಕ್ಕುಗಳನ್ನು ರಕ್ಷಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಠಾಧಿಪತಿ ಆಗಿರುವ ಬಾಲಕನನ್ನು ವಶಕ್ಕೆ ಪಡೆಯಲು ನಿರ್ದೇಶನ ನೀಡಬೇಕು’ ಎಂದು ಕೋರಿದ್ದಾರೆ.

‘ಲಾಕ್‌ಡೌನ್ ನಿಯಮಾವಳಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಉಲ್ಲಂಘಿಸಿ ಪೀಠಾಧಿಪತಿ ನೇಮಕ ಕಾರ್ಯಕ್ರಮ ನಡೆಸಲಾಗಿದೆ’ ಎಂದೂ ಅರ್ಜಿದಾರರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.