ADVERTISEMENT

ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ: ಕೊಲ್ಹಾಪುರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ

ಕನ್ನಡಿಗರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 20:16 IST
Last Updated 28 ಡಿಸೆಂಬರ್ 2019, 20:16 IST
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡ ಧ್ವಜ ಸುಟ್ಟ ಶಿವಸೇನೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಕರವೇ ಹಾಗೂ ಕನ್ನಡ ಸಂಘಟನೆಗಳ ಮುಖಂಡರು ಅಶೋಕ ವೃತ್ತದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ‍ಪ್ರತಿಕೃತಿ ದಹಿಸಿದರು
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡ ಧ್ವಜ ಸುಟ್ಟ ಶಿವಸೇನೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಕರವೇ ಹಾಗೂ ಕನ್ನಡ ಸಂಘಟನೆಗಳ ಮುಖಂಡರು ಅಶೋಕ ವೃತ್ತದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ‍ಪ್ರತಿಕೃತಿ ದಹಿಸಿದರು   

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಶನಿವಾರ ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಇದರ ಬಗ್ಗೆ ಕನ್ನಡ ಸಂಘಟನೆಗಳ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

‘ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹಾಕಿ’ ಎಂಬ ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಭೀಮಾಶಂಕರ ಅವರ ಪ್ರತಿಕೃತಿಯ ಮೇಲೆ ಕನ್ನಡ ಧ್ವಜ ಹಾಕಿ ಅದರ ಸಮೇತ ಸುಟ್ಟು ಹಾಕಿದ್ದಾರೆ.

ಠಾಕ್ರೆ ಪ್ರತಿಕೃತಿ ದಹಿಸಿ ‌ಆಕ್ರೋಶ:ಕೊಲ್ಹಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ವಿಷಯ ತಿಳಿಯುತ್ತಿದ್ದಂತೆಯೇ, ಇಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರವಾಸಿಮಂದಿರದ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲಿಂದ ಅಶೋಕ ವೃತ್ತದವರೆಗೆ ಮೆರವಣಿಗೆ ನಡೆಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಗಡಿ ವಿವಾದ ನ್ಯಾಯಾಲಯದಲ್ಲಿದ್ದರೂ ಶಿವಸೇನೆ ಪದೇ ಪದೇ ಗಡಿ ಕ್ಯಾತೆ ತೆಗೆದು, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಶಿವಸೇನೆ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕರವೇ ಯುವ ವಿಭಾಗ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಮುಖಂಡರಾದ ಸುರೇಶ ಗವಣ್ಣವರ, ರಮೇಶ ಬದ್ನೂರ, ಗಣೇಶ ರೋಕಡೆ, ಅಮೃತ ಇಝಾರೆ, ಹೊಳೆಪ್ಪ ಸುಳದಾಳ, ರಾಮಾ ಒಣ್ಣೂರ, ಪ್ರಕಾಶ ಪಾಣ್ಯಾಗೋಳ, ಸುಮಿತ ಅಗಸಗಿ, ಯಶೋದಾ ಬಿರಡೆ, ಶ್ವೇತಾ ಜಗದಾಳೆ ಇದ್ದರು.

ಈ ನಡುವೆ, ಬೆಳಗಾವಿಯಲ್ಲಿ ಗಡಿ ವಿವಾದ ಕೆದಕಲು ಮತ್ತು ಮರಾಠಿ ಭಾಷಿಕರನ್ನು ಪ್ರಚೋದಿಸಲು ಶಿವಸೇನೆ ಮುಂದಾಗಿದೆ ಎನ್ನಲಾಗುತ್ತಿದೆ.

‘ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿರುವ ಕರ್ನಾಟಕ ಪ್ರದೇಶಗಳನ್ನು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಿಸಬೇಕು’ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಆ ರಾಜ್ಯದ ಚಂದಗಡ ಕ್ಷೇತ್ರದ ಶಾಸಕ ರಾಜೇಶ ಪಾಟೀಲ ಭಾನುವಾರ(ಡಿ. 29) ನಗರಕ್ಕೆ ಬರಲಿದ್ದಾರೆ. ಮಧ್ಯಾಹ್ನ 3ಕ್ಕೆ ಅನಗೋಳದ ಆದರ್ಶ ವಿವಿಧೋದ್ದೇಶ ಸೊಸೈಟಿ ಸಭಾಂಗಣದಲ್ಲಿ ಎಂಇಎಸ್ ಯುವ ಘಟಕ ಆಯೋಜಿಸಿರುವ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಮ್ನಾದಲ್ಲಿ ಸರ್ಕಾರದ ವಿರುದ್ಧ ಲೇಖನ:

ಶಿವಸೇನೆ ಮುಖವಾಣಿ ‘ಸಾಮ್ನಾ’ದಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಲೇಖನ ಪ್ರಕಟವಾಗಿದೆ. ನವನಿರ್ಮಾಣ ಸೇನೆ ಅಧ್ಯಕ್ಷನ ಹೇಳಿಕೆ ಪ್ರಸ್ತಾಪಿಸಲಾಗಿದೆ. ‘ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ನ್ಯಾಯ ಕೇಳಿದರೆ ಗುಂಡು ಬೀಳುತ್ತದೆ ಎನ್ನುವುದು ಖಾತ್ರಿಯಾಗಿದೆ. ಒಂದೆಡೆ ತಮ್ಮದು ಹಿಂದುತ್ವ ಪ್ರತಿಪಾದಿಸುವ ಪಕ್ಷವೆಂದು ಬಿಜೆಪಿ ಹೇಳಿಕೊಳ್ಳುತ್ತದೆ. ಮತ್ತೊಂದೆಡೆ ಎಂಇಎಸ್ ನಾಯಕರನ್ನು ಗುಂಡಿಕ್ಕಿ ಎಂಬ ಹೇಳಿಕೆಗಳು ಕೇಳಿಬರುತ್ತಿವೆ. ಮರಾಠಿ ಭಾಷಿಕರೂ ಹಿಂದೂಗಳೇ ಆಗಿದ್ದಾರೆ. ಬೆಳಗಾವಿ ನಗರಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸಿದರೆ ಕ್ರಮ ಕೈಗೊಳ್ಳುತ್ತಾರೆ. ಇದೇನಾ ನಿಮ್ಮ ಹಿಂದುತ್ವ?’ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದು ತಿಳಿದುಬಂದಿದೆ.

‘ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು. ಚಂದಗಡ ಶಾಸಕ ರಾಜೇಶ ಪಾಟೀಲ ಬೆಳಗಾವಿ ಪ್ರವೇಶಕ್ಕೆ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ಕೊಟ್ಟಲ್ಲಿ ಮುಂದಾಗುವ ಘಟನೆಗಳಿಗೆ ಪೊಲೀಸ್ ಇಲಾಖೆ ಹೊಣೆಯಾಗಬೇಕಾಗುತ್ತದೆ’ ಎಂದು ಭೀಮಾಶಂಕರ ಪಾಟೀಲ ಒತ್ತಾಯಿಸಿದ್ದಾರೆ.

‘ನ್ಯಾಯ ಕೇಳಿದರೆ ಗುಂಡೇಟು’
ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಲೇಖನ ಪ್ರಕಟವಾಗಿದೆ. ನವ ನಿರ್ಮಾಣ ಸೇನೆ ಅಧ್ಯಕ್ಷರ ಹೇಳಿಕೆ ಪ್ರಸ್ತಾಪಿಸಿ, ‘ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ನ್ಯಾಯ ಕೇಳಿದರೆ ಗುಂಡು ಬೀಳುತ್ತದೆ ಎನ್ನುವುದು ಖಾತ್ರಿಯಾಗಿದೆ. ಎಂಇಎಸ್ ನಾಯಕರನ್ನು ಗುಂಡಿಕ್ಕಿ ಎಂಬ ಹೇಳಿಕೆಗಳನ್ನು ಬಿಜೆಪಿ ಸಹಿಸುತ್ತದೆ. ಮರಾಠಿ ಭಾಷಿಗರೂ ಹಿಂದೂಗಳೇ. ಬೆಳಗಾವಿ ನಗರಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸಿದರೆ ಕ್ರಮ ಕೈಗೊಳ್ಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

*
‘ಶಿವಸೇನಾ ಹಾಗೂ ಎಂಇಎಸ್ ಸಂಘಟನೆಗಳನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು. ಚಂದಗಡ ಶಾಸಕ ರಾಜೇಶ ಪಾಟೀಲ ಬೆಳಗಾವಿ ಪ್ರವೇಶಕ್ಕೆ ಅನುಮತಿ ನೀಡಬಾರದು.
-ಭೀಮಾಶಂಕರ ಪಾಟೀಲ,ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.