ADVERTISEMENT

ನೇಣು ಹಾಕೋದು ಶಿವಕುಮಾರ್ ಸಂಸ್ಕಾರ: ಡಾ.ಕೆ.ಸುಧಾಕರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 11:52 IST
Last Updated 29 ಅಕ್ಟೋಬರ್ 2019, 11:52 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್    

ಚಿಕ್ಕಬಳ್ಳಾಪುರ: ‘ನೇಣು ಹಾಕೋದು, ಹಾಕಿಕೊಳ್ಳುವುದು, ಹಾಕಿಸೋದು, ಏಕವಚನದಲ್ಲಿ ಮಾತನಾಡುವುದು ಡಿ.ಕೆ.ಶಿವಕುಮಾರ್ ಅವರು ಕಲಿತ ಸಂಸ್ಕಾರ. ನನ್ನ ವಿಚಾರವಾಗಿ ಏಕವಚನದಲ್ಲಿ ಮಾತನಾಡಲು ಅವರೇನು ನನ್ನ ಹಿರಿಯ ಅಣ್ಣನಾ? ಮೊದಲು ಅವರು ಸಾರ್ವಜನಿಕ ಬದುಕಿನಲ್ಲಿ ಹೇಗೆ ಬದುಕಬೇಕು ಎನ್ನುವುದು ತಿಳಿದುಕೊಳ್ಳಲಿ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ 2016–17ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿತ್ತು. ಅದಕ್ಕೆ ಮೊದಲು ಅನುದಾನ ನೀಡಬೇಕಾದದ್ದು ಸಮ್ಮಿಶ್ರ ಸರ್ಕಾರದ ಧರ್ಮವಾಗಿತ್ತು. ಆದರೆ ಧರ್ಮ ಪಾಲನೆ ಆಗಿಲ್ಲ. ಆದ್ದರಿಂದ, ಮಲತಾಯಿ ಧೋರಣೆ, ಅನ್ಯಾಯದಿಂದ ಬೇಸತ್ತು ರಾಜೀನಾಮೆ ನೀಡಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಮನಗರಕ್ಕೆ ಆರೋಗ್ಯ ವಿಶ್ವವಿದ್ಯಾಲಯ ಮಂಜೂರಾಗಿದೆ. ಅಷ್ಟಾಗಿಯೂ ಸಮ್ಮಿಶ್ರ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಶಿವಕುಮಾರ್ ಅವರು ಅದೇ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಔಚಿತ್ಯ ಏನಿದೆ? ಹೊಸ ಸರ್ಕಾರ ಬಂದ ಮೇಲೆ ಈ ವಿಚಾರವನ್ನು ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿಳಿಸಿ, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದೆ. ಕನಕಪುರ ಕಾಲೇಜು ರದ್ದು ಮಾಡಿ ಎಂದು ಹೇಳಿಲ್ಲ’ ಎಂದು ತಿಳಿಸಿದರು.

‘ಮೊದಲು ಜಿಲ್ಲೆಗಳಿಗೆ ವೈದ್ಯಕೀಯ ಕಾಲೇಜು ನೀಡುವುದು ಸರಿ ಎಂದು ಯಡಿಯೂರಪ್ಪ ಅವರ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ದೊರೆತಿದೆ. ಉಪ ಚುನಾವಣೆಗೆ ಬರುವ ಮುನ್ನವೇ ಕಾಲೇಜು ನಿರ್ಮಾಣ ಕಾಮಗಾರಿಗೆ ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಲ್ಲದಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ’ ಎಂದು ಹೇಳಿದರು.

‘ಎಲ್ಲರನ್ನೂ ಪ್ರೀತಿಸುವುದು, ಹಿರಿಯರನ್ನು ಗೌರವಿಸುವುದು, ಜನಪರವಾಗಿ ಬಡವರಿಗೆ ಕಲ್ಯಾಣ ಕಾರ್ಯಕ್ರಮ ಮಾಡುವುದು ನಾನು ಕಲಿತ ಸಂಸ್ಕಾರ. ಹೊಡೆಯುವುದು, ಬಡೆಯುವುದು, ಕೊಲ್ಲುವುದು, ನೇಣು ಹಾಕಿಸೋದು, ಹಾಕಿಕೊಳ್ಳುವುದು ಇವು ನನ್ನ ಸಂಸ್ಕೃತಿ, ಸಂಸ್ಕಾರವಲ್ಲ. ಶಿವಕುಮಾರ್ ಅವರ ಬಳಿ ನಾನು ಯಾವತ್ತೂ ಹೋಗಿಲ್ಲ. ನನ್ನ ಬಗ್ಗೆ ಏಕೆ ಕೋಪ ಮಾಡಿಕೊಂಡು ಅವರು ಕೇವಲವಾಗಿ ಮಾತನಾಡಬೇಕು’ ಎಂದು ಸುಧಾಕರ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.