ADVERTISEMENT

ಶಿವಕುಮಾರ ಶ್ರೀ ಆಧುನಿಕ ಬಸವಣ್ಣ: ಅಮಿತ್‌ ಶಾ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 16:45 IST
Last Updated 1 ಏಪ್ರಿಲ್ 2022, 16:45 IST
ಅಮಿತ್‌ ಶಾ
ಅಮಿತ್‌ ಶಾ    

ತುಮಕೂರು: ‘ಉತ್ತರದಲ್ಲಿ ಗಂಗಾ, ದಕ್ಷಿಣದಲ್ಲಿ ಸಿದ್ಧಗಂಗಾ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿದ್ಧಗಂಗಾ ಮಠವನ್ನು ಬಣ್ಣಿಸಿದರು.

ಭಾಷಣದ ಉದ್ದಕ್ಕೂ ಮಠದ ಸೇವೆಯನ್ನು ಸ್ಮರಿಸಿದ ಅವರು, ‘ಉತ್ತರದಲ್ಲಿ ಗಂಗಾ ನದಿ ಹರಿಯುತ್ತಿದೆ. ಇಲ್ಲಿ ಸಿದ್ಧಗಂಗೆ ಹೆಸರು ಪ್ರಖ್ಯಾತವಾಗಿದೆ. ಗಂಗೆಯಲ್ಲಿ ಸ್ನಾನ ಮಾಡಿದರೆ ಜೀವನದಲ್ಲಿ ಮಾಡಿದ ಪಾಪ ಕಳೆಯುತ್ತದೆ. ಸಿದ್ಧಗಂಗಾ ಮಠಕ್ಕೆ ಬಂದರೆ ಅನೇಕ ಜನ್ಮಕ್ಕೆ ಸಾಕಾಗುವಷ್ಟು ಪುಣ್ಯ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಶಿವಕುಮಾರ ಸ್ವಾಮೀಜಿ ಅವರನ್ನು ‘ಆಧುನಿಕ ಬಸವಣ್ಣ’ ಎಂದು ಕರೆದರು.

ADVERTISEMENT

ಬಸವಣ್ಣನ ವಚನಗಳು ಮಾದರಿ ಆಗಿರುವಂತೆ, ದೇಶಕ್ಕೆ ಸ್ವಾಮೀಜಿ ಅವರು ಮಾದರಿಯಾಗಿದ್ದಾರೆ. ತ್ರಿವಿಧ ದಾಸೋಹ, ಕಾಯಕದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಸಿದ್ಧಗಂಗಾ ಮಠ ಹೆಸರಿಗೆ ತಕ್ಕಂತೆ ಸಿದ್ಧಾಂತದ ಮಠವಾಗಿದೆ ಎಂದು ಹೇಳಿದರು.

ಮಠಕ್ಕೆ ಬರುತ್ತಿದ್ದಂತೆ ಮೊದಲಿಗೆ ಶ್ರೀಗಳ ಗದ್ದುಗೆಗೆ ತೆರಳಿ ದರ್ಶನ ಪಡೆದರು. ವೇದಿಕೆ ಕಾರ್ಯಕ್ರಮದಲ್ಲಿ ಶಾ, ಹಿಂದೆ ತಾವು ಮಠಕ್ಕೆ ಭೇಟಿ ಕೊಟ್ಟಿದ್ದ ನೆನಪುಗಳನ್ನು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.