ADVERTISEMENT

‘ದೈವಿ ಶಕ್ತಿ ಪ್ರಭಾವ’: ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಚೇತರಿಕೆ

ಶಿವಕುಮಾರ ಸ್ವಾಮೀಜಿ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 20:00 IST
Last Updated 18 ಜನವರಿ 2019, 20:00 IST
   

ತುಮಕೂರು: ‘ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರಗೊಂಡ ಬಳಿಕ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವೈದ್ಯರೇ ಅಶ್ಚರ್ಯಪಡುವ ರೀತಿಯಲ್ಲಿ ಚೇತರಿಕೆ ಕಂಡಿದೆ. ಇದೆಲ್ಲ ದೈವಿಶಕ್ತಿ ಪ್ರಭಾವ ಮತ್ತು ಪವಾಡ ಎಂದು ಭಾವಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸ್ವಾಮೀಜಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸ್ವಾಮೀಜಿ ಅವರ ದೈವಿಭಕ್ತಿ, ಅವರು ಸಮಾಜಕ್ಕೆ ಮಾಡಿರುವ ಸೇವೆಯಿಂದಲೇ ಪವಾಡ ಸದೃಶ ರೀತಿಯಲ್ಲಿ ಚೇತರಿಸಿಕೊಂಡಿರಬಹುದು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರುವುದು ಸಮಾಧಾನ ತಂದಿದೆ ಎಂದರು.

‘ಸ್ವಾಮೀಜಿಯವರಿಗೆ ಸಿದ್ಧಗಂಗಾ ಆಸ್ಪತ್ರೆ, ರೇಲಾ ಆಸ್ಪತ್ರೆ, ಬಿಜಿಎಸ್ ಆಸ್ಪತ್ರೆ ವೈದ್ಯರು ನೀಡುತ್ತಿರುವ ಚಿಕಿತ್ಸೆ ಒಂದು ಕಡೆಯಾದರೆ, ದೈವಿಶಕ್ತಿ ಬಲವೂ ಸ್ವಾಮೀಜಿ ಅವರಿಗೆ ಇದೆ. ಹಾಗಾಗಿಯೇ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ’ ಎಂದು ನುಡಿದರು.

ADVERTISEMENT

‘ಈ ರೀತಿ ಚೇತರಿಸಿಕೊಂಡವರನ್ನು ಹಿಂದೆ ನಾನು ನೋಡಿಲ್ಲ. ವೈದ್ಯರಿಗೇ ಇದು ಆಶ್ಚರ್ಯ ತಂದಿದೆ. ಮಠದಲ್ಲಿಯೇ ವೈದ್ಯರು ಉತ್ತಮ ರೀತಿ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕಿತ್ಸೆಗಾಗಿವಿದೇಶಕ್ಕೆ ಸ್ಥಳಾಂತರ ಮಾಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಕುರಿತು ಡಾ.ಪರಮೇಶ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿವರಿಸಿದರು. ಕಿರಿಯಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಇದ್ದರು

‘ಹನ್ನೆರಡು ವರ್ಷಗಳ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಆಗಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಗೆ ಮನವಿ ಮಾಡಿದ್ದೆ. ಈಗ ಅಗತ್ಯಬಿದ್ದರೆ ಮತ್ತೊಮ್ಮೆ ಪ್ರಧಾನಿ ಮತ್ತು ರಾಷ್ಟ್ರಪತಿ ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ’ ಎಂದು ನುಡಿದರು.

ಚೇತರಿಕೆ ಸ್ಥಿರ: ಗುರುವಾರ ಸಂಜೆಯಿಂದ ಚೇತರಿಕೆ ಕಂಡಿರುವ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಶುಕ್ರವಾರ ಅದೇ ಸ್ಥಿತಿಯಲ್ಲಿದ್ದು, ಚಿಕಿತ್ಸೆಗೆ ಸ್ವಾಮೀಜಿ ಸ್ಪಂದಿಸುತ್ತಿರುವುದರಿಂದ ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂಬ ವಿಶ್ವಾಸವನ್ನು ವೈದ್ಯರು ಮತ್ತುಕಿರಿಯಶ್ರೀ ಸಿದ್ಧಲಿಂಗ ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.