ADVERTISEMENT

ಸಂತ್ರಸ್ತರು ಮೂರು ಸಾವಿರ; ಫಲಾನುಭವಿಗಳು 6 ಸಾವಿರ!

ರಾಜಕೀಯ ಮುಖಂಡರ ಹಿಂಬಾಲಕರಿಗೂ ಭಕ್ಷೀಸು

ಚಂದ್ರಹಾಸ ಹಿರೇಮಳಲಿ
Published 17 ಅಕ್ಟೋಬರ್ 2019, 18:59 IST
Last Updated 17 ಅಕ್ಟೋಬರ್ 2019, 18:59 IST
   

ಶಿವಮೊಗ್ಗ: ಎರಡು ತಿಂಗಳ ಹಿಂದೆ ಸುರಿದ ಭಾರಿ ಮಳೆ, ತುಂಗಾ ಪ್ರವಾಹಕ್ಕೆ ಸಿಲುಕಿದ್ದ ಸಂತ್ರಸ್ತ ಕುಟುಂಬಗಳ ಸಂಖ್ಯೆ ಮೂರು ಸಾವಿರ. ಸರ್ಕಾರ ನೀಡಿದ ತಲಾ ₹ 10 ಸಾವಿರದ ಪರಿಹಾರ ಪಡೆದವರು ಆರು ಸಾವಿರ!

ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ತಲಾ ₹ 10 ಸಾವಿರ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದರು. ಜಿಲ್ಲಾಡಳಿತ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ವೆ ನಡೆಸಿ, ಸಂತ್ರಸ್ತ ಕುಟುಂಬಗಳ ಪಟ್ಟಿ ತಯಾರಿಸಿತ್ತು. ಆ ಪಟ್ಟಿಯ ಪ್ರಕಾರ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ನುಗ್ಗಿದ್ದ ಕುಂಬಾರಗುಂಡಿ, ಬಿ.ಬಿ. ರಸ್ತೆ, ಮಂಜುನಾಥ ಟಾಕೀಸ್ ರಸ್ತೆ, ಮಹಾಕವಿ ಕಾಳಿದಾಸ ರಸ್ತೆ, ವಿದ್ಯಾನಗರ, ಚಿಕ್ಕಲ್, ಗುರುಪುರ, ಟ್ಯಾಂಕ್‌ಮೊಹಲ್ಲಾ, ಬಾಪೂಜಿ ನಗರ ಮತ್ತಿತರ ಬಡಾವಣೆಗಳು ಸೇರಿ ಒಟ್ಟು ಸಂತ್ರಸ್ತರ ಸಂಖ್ಯೆ 3 ಸಾವಿರ ದಾಟಿರಲಿಲ್ಲ.

ನಗರ ಪಾಲಿಕೆ, ಕಂದಾಯ ಇಲಾಖೆ ನಡೆಸಿದ ಜಂಟಿ ಸರ್ವೆಯಲ್ಲೂ ಸಂತ್ರಸ್ತ ಕುಟುಂಬಗಳ ಸಂಖ್ಯೆ 3 ಸಾವಿರದ ಒಳಗೆ ಇತ್ತು. ಆದರೆ, ಜಿಲ್ಲಾಡಳಿತ ತಲಾ ₹ 10 ಸಾವಿರ ಪರಿಹಾರ ನೀಡಲು ಪ್ರಕಟಣೆ ನೀಡಿದಾಗ ಬಂದ ಅರ್ಜಿಗಳ ಸಂಖ್ಯೆ 7 ಸಾವಿರ ದಾಟಿತ್ತು. ಆ ಪೈಕಿ 6,098 ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ.

ADVERTISEMENT

ಜಿಲ್ಲಾಡಳಿತ ಇಡೀ ಜಿಲ್ಲೆಯಲ್ಲಿ ಪರಿಹಾರ ನೀಡಿದ ಸಂತ್ರಸ್ತ ಕುಟುಂಬಗಳ ಸಂಖ್ಯೆ 6,207 ಇದೆ. ಅವರಲ್ಲಿ ನಗರ ಪಾಲಿಕೆ ವ್ಯಾಪ್ತಿಯ ಸಂತ್ರಸ್ತರೇ 6,098. ಅಂದರೆ ಜಿಲ್ಲೆಯ ಇತರೆ ನಗರ, ಪಟ್ಟಣ, ಗ್ರಾಮಾಂತರ ಭಾಗದಲ್ಲಿ ಪರಿಹಾರ ಪಡೆದ ಸಂತ್ರಸ್ತರು ಬರಿ 109!

ಪಾಲಿಕೆ ಸದಸ್ಯರು, ಪಕ್ಷದ ಹಿಂಬಾಲಕರಿಗೂ ಭಕ್ಷೀಸು: ಪರಿಹಾರಕ್ಕಾಗಿ ಸಂತ್ರಸ್ತರ ಪಟ್ಟಿ ನೀಡುವಾಗ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ನಿಜವಾದ ಸಂತ್ರಸ್ತ ಕುಟುಂಬಗಳ ಜತೆಗೆ ತಮ್ಮ ಹಿಂಬಾ
ಲಕರ ಬ್ಯಾಂಕ್‌ ಖಾತೆ, ಮನೆಯ ದಾಖಲೆಗಳನ್ನೂ ಸಲ್ಲಿಸಿದ್ದಾರೆ. ಹೀಗಾಗಿ ಸಂತ್ರಸ್ತರ ಪಟ್ಟಿ ದ್ವಿಗುಣವಾಗಿದೆ. ಈ ವಿಚಾರವಾಗಿ ಪಾಲಿಕೆ ಸದಸ್ಯರು, ಆಯುಕ್ತೆಯ ಮಧ್ಯೆ ಜಟಾಪಟಿಯೂ ನಡೆದಿತ್ತು.ಸರ್ವೆ ಪಟ್ಟಿಯಲ್ಲಿ ಇಲ್ಲದ ಹೆಸರನ್ನು ಹಿಂದಿನ ಆಯುಕ್ತೆ ಚಾರುಲತಾ ಸೋಮಲ್ ತಿರಸ್ಕರಿಸಿದ್ದರು. ಅವರ ವರ್ಗಾವಣೆ ನಂತರವೇ ತಿರಸ್ಕರಿಸಿದ್ದ ಸಂತ್ರಸ್ತರ ಪಟ್ಟಿಗೂ ಪರಿಹಾರದ ಮೊತ್ತ ಜಮೆ ಆಗಿದೆ. ಹಣ ಜಮೆ ಮಾಡುವಾಗ ನಕಲಿ ಸಂತ್ರಸ್ತರಿಂದ ಅರ್ಧದಷ್ಟು ಹಣ ಮರಳಿ ಪಡೆದ ಆರೋಪಗಳು ಕೇಳಿಬಂದಿವೆ.

‘ಸಂತ್ರಸ್ತರ ಪಟ್ಟಿ ಅಂತಿಮಗೊಳಿಸುವ ಹೊಣೆಗಾರಿಕೆಯನ್ನು ಪಾಲಿಕೆಗೆ ನೀಡಲಾಗಿತ್ತು. ಅವರು ಕಳುಹಿಸಿದ ಪಟ್ಟಿಯಂತೆ ಸಂತ್ರಸ್ತ ಕುಟುಂಬಗಳ ಖಾತೆಗೆ ತಾಲ್ಲೂಕು ಆಡಳಿತ ಪರಿಹಾರದ ಹಣ ಜಮೆ ಮಾಡಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಅನುರಾಧ ಹಾಗೂ ತಹಶೀಲ್ದಾರ್ ಗಿರೀಶ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.