ADVERTISEMENT

ಶಿವಮೊಗ್ಗ: ಮಾಜಿ ಸಿ.ಎಂ ಕುಟುಂಬಗಳ ಜಿದ್ದಾಜಿದ್ದಿ

ಶಿವಮೊಗ್ಗ ಉಪ ಚುನಾವಣೆ: ಮುಂದುವರಿದ ರಾಜಕೀಯ ಕದನ

ಚಂದ್ರಹಾಸ ಹಿರೇಮಳಲಿ
Published 17 ಅಕ್ಟೋಬರ್ 2018, 5:16 IST
Last Updated 17 ಅಕ್ಟೋಬರ್ 2018, 5:16 IST
ಮಧು ಬಂಗಾರಪ್ಪ ಹಾಗೂ ಬಿ.ವೈ. ರಾಘವೇಂದ್ರ
ಮಧು ಬಂಗಾರಪ್ಪ ಹಾಗೂ ಬಿ.ವೈ. ರಾಘವೇಂದ್ರ    

ಶಿವಮೊಗ್ಗ:ಇಪ್ಪತ್ತೇಳು ವರ್ಷಗಳ ಹಿಂದೆ ಆರಂಭವಾಗಿದ್ದ ಜಿಲ್ಲೆಯ ಇಬ್ಬರು ಪ್ರಮುಖ ರಾಜಕೀಯ ನಾಯಕರಕುಟುಂಬಗಳ ನಡುವಿನ ಕದನ ಈ ಉಪಚುನಾವಣೆಯಲ್ಲೂ ಮುಂದುವರಿದಿದೆ.

ಮಾಜಿ ಮುಖ್ಯಮಂತ್ರಿಗಳಾದ ಎಸ್‌. ಬಂಗಾರಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ಕುಟುಂಬಗಳ ಮಧ್ಯೆ ಎರಡೂವರೆ ದಶಕಗಳಿಂದ ರಾಜಕೀಯ ಜಿದ್ದಾಜಿದ್ದಿ ನಡೆದುಕೊಂಡು ಬಂದಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 1991ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿ ಈ ಎರಡೂ ಕುಟುಂಬಗಳು ಮುಖಾಮುಖಿಯಾಗಿದ್ದವು. ಅಂದು ಬಂಗಾರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ವಿರುದ್ಧ ತಮ್ಮ ಸಂಬಂಧಿ ಕೆ.ಜಿ. ಶಿವಪ್ಪ ಅವರನ್ನು ಕಣಕ್ಕಿಳಿಸಿ, ಗೆಲ್ಲಿಸಿಕೊಂಡಿದ್ದರು.

ADVERTISEMENT

1996ರಿಂದ 2005ರವರೆಗೆ ನಡೆದಿದ್ದ ನಾಲ್ಕು ಸಾರ್ವತ್ರಿಕ ಚುನಾವಣೆಗಳು ಹಾಗೂ ಒಂದು ಉಪಚುನಾವಣೆಯಲ್ಲಿ ನಾಲ್ಕು ಬಾರಿ ಬಂಗಾರಪ್ಪ ವಿಜಯಮಾಲೆ ಧರಿಸಿದ್ದರು. (ಪ್ರತಿ ಬಾರಿಯೂ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದು ವಿಶೇಷ) 1998ರಲ್ಲಿ ಒಂದು ಬಾರಿ ಬಿಜೆಪಿಯ ಆಯನೂರು ಮಂಜುನಾಥ್‌, ಬಂಗಾರಪ್ಪ ಅವರನ್ನು ಮಣಿಸಿ ಸಂಸತ್ಪ್ರವೇಶಿಸಿದ್ದರು.

ತಂದೆಯ ಸೋಲಿಗೆ ಮಗನ ಮುಯ್ಯಿ: 2009ರಲ್ಲಿ ಬಂಗಾರಪ್ಪ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ 52,893 ಮತಗಳ ಅಂತರದಿಂದ ಮಣಿಸುವ ಮೂಲಕ ತಂದೆಯ ಸೋಲಿನ ಸೇಡು ತೀರಿಸಿಕೊಂಡಿದ್ದರು.

ಯಡಿಯೂರಪ್ಪ ವಿರುದ್ಧ ಗೀತಾ: 2014ರ ಲೋಕಸಭಾ ಚುನಾವಣೆಯಲ್ಲಿ ಸ್ವತಃ ಯಡಿಯೂರಪ್ಪ ಕಣಕ್ಕೆ ಇಳಿದಿದ್ದರು. ಅವರ ವಿರುದ್ಧ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಜೆಡಿಎಸ್ ಟಿಕೆಟ್‌ ನೀಡಿತ್ತು. ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಯಡಿಯೂರಪ್ಪ 3,63,305 ಮತಗಳ ದಾಖಲೆಯ ಅಂತರದಿಂದ ಗೆಲುವು ಪಡೆದಿದ್ದರು.

ಮತ್ತೆ ಎರಡು ಕುಟುಂಬಗಳ ಸ್ಪರ್ಧೆ:ಈ ಬಾರಿಯ ಉಪಚುನಾವಣೆಯಲ್ಲೂ ಮತ್ತೆ ಎರಡೂ ಕುಟುಂಬಗಳ
ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಇದೇ ಮೊದಲ ಬಾರಿ ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಮುಖಾ ಮುಖಿಯಾಗುತ್ತಿದ್ದಾರೆ.

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಸ್ಪರ್ಧೆ ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿದೆ. ರಾಘವೇಂದ್ರ ಅವರ ಗೆಲುವಿಗೆ ಯಡಿಯೂರಪ್ಪ ಕ್ಷೇತ್ರ ಸುತ್ತುತ್ತಿದ್ದಾರೆ. ಮಧು ಬೆನ್ನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಸೇರಿದಂತೆ ಜೆಡಿಎಸ್‌, ಕಾಂಗ್ರೆಸ್ ಮುಖಂಡರು ನಿಂತಿದ್ದಾರೆ.

ಅವಧಿ ಕಡಿಮೆ ಇದ್ದರೂ ಅಬ್ಬರ ಜೋರಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಇದು ರಾಘವೇಂದ್ರಅವರಿಗೆ ವರವಾಗಿದೆ. ರಾಜ್ಯದಲ್ಲಿ ಜೆಡಿಎಸ್‌– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರುವುದು, ಹಾಗೂ ಜಾತ್ಯತೀತ ಮತಗಳ ಕ್ರೋಡೀಕರಣ ಮಧು ಬಂಗಾರಪ್ಪ ಅವರಿಗೆ ಶ್ರೀರಕ್ಷೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಹಿಮ ಪ್ರವೇಶ, ಲಾಭ–ನಷ್ಟದ ಲೆಕ್ಕಾಚಾರ:ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲರ ಪುತ್ರ ಮಹಿಮ ಪಟೇಲ್‌ ಜೆಡಿಯುನಿಂದ ಕಣಕ್ಕೆ ಇಳಿದಿದ್ದಾರೆ. ಅವಿಭಜಿತ ಶಿವಮೊಗ್ಗ ಜಿಲ್ಲೆಯಲ್ಲಿ (ಚನ್ನಗಿರಿಕ್ಷೇತ್ರ)ಇದ್ದಾಗ ಅವರ ತಂದೆ ಮುಖ್ಯಮಂತ್ರಿಯಾಗಿದ್ದರು. ಇದೇ ಕ್ಷೇತ್ರದಿಂದ ಒಂದು ಬಾರಿ ಸಂಸತ್ ಪ್ರವೇಶಿಸಿದ್ದರು.

ಈಗ ಮಹಿಮ ಹೊರ ಜಿಲ್ಲೆಯವರಾದ ಕಾರಣ ಇಲ್ಲಿ ಅಂತಹ ಪ್ರಭಾವ ಹೊಂದಿಲ್ಲ. ಅವರ ಸ್ಪರ್ಧೆ ಯಾರಿಗೆ ಲಾಭ, ಯಾರಿಗೆ ನಷ್ಟ ತರುತ್ತದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.