ADVERTISEMENT

ಶಿವಮೊಗ್ಗ DCC ಬ್ಯಾಂಕ್‌ನಲ್ಲಿ ಅವ್ಯವಹಾರ ಪ್ರಕರಣ: ಮಂಜುನಾಥ ಗೌಡ ಮೇಲ್ಮನವಿ ವಜಾ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 16:22 IST
Last Updated 28 ಮಾರ್ಚ್ 2025, 16:22 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿಗಳ ಅವ್ಯವಹಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧ್ಯಕ್ಷ ಆರ್‌.ಎಂ.ಮಂಜುನಾಥ್‌ ಗೌಡ ಅವರು ಜಾರಿ ನಿರ್ದೇಶನಾಲಯ (ಇ.ಡಿ.) ತಮಗೆ ನೀಡಿದ್ದ ಸಮನ್ಸ್‌ ಪ್ರಶ್ನಿಸಿದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತ ರಿಟ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ–2002ರ (ಪಿಎಂಎಲ್‌ಎ) ಅನುಸಾರ ಷೆಡ್ಯೂಲ್ಡ್‌ ಅಪರಾಧ ಪ್ರಕರಣಗಳಲ್ಲಿ ಆರೋಪಿಯ ಹೆಸರು ಇಲ್ಲದಿದ್ದರೂ, ಅಂತಹವರಿಗೂ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್‌ ಜಾರಿಗೊಳಿಸಬಹುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಸಮನ್ಸ್‌ ಜಾರಿಗೊಳಿಸಿದಾಕ್ಷಣ ಆರ್ಜಿದಾರರ ವಿರುದ್ಧ ಯಾವುದೇ ಆರೋಪ ಮಾಡಿದಂತೆ ಅಲ್ಲ. ಸಮನ್ಸ್ ಪಡೆದವರು ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಬೇಕು ಅಷ್ಟೇ. ಸಮನ್ಸ್‌ ಜಾರಿ ಕ್ರಮವನ್ನು ದೋಷಪೂರಿತ ಎಂದು ಪರಿಗಣಿಸಲು ಆಗದು. ಹೀಗಾಗಿ, ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶ ಸರಿಯಾಗಿಯೇ ಇದೆ’ ಎಂದು ಹೇಳಿದೆ. ಇ.ಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌ ಹಾಗೂ ಮಧುಕರ ಎಂ.ದೇಶಪಾಂಡೆ ವಾದ ಮಂಡಿಸಿದ್ದರು.

ADVERTISEMENT

ಪ್ರಕರಣವೇನು?: ‘ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಗಾಂಧಿ ಬಜಾರ್‌ ಶಾಖೆಯಲ್ಲಿ, 2014ರಲ್ಲಿ ನಡೆದ ₹62.77 ಕೋಟಿ ಬಂಗಾರ ಅಡಮಾನ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು 2014ರ ಅಕ್ಟೋಬರ್‌ 18ರಂದು ವಿಚಾರಣಾ ನ್ಯಾಯಾಲಯಕ್ಕೆ ಮೊದಲ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 1997ರಿಂದ 2020ರವರೆಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಆರ್‌.ಎಂ.ಮಂಜುನಾಥ ಗೌಡ ಅವರಿಗೆ 2023ರ ಅಕ್ಟೋಬರ್ 6ರಂದು ಇ.ಡಿ ಸಮನ್ಸ್‌ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಂಜುನಾಥ ಗೌಡ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್‌.ನಟರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ 2024ರ ಫೆಬ್ರುವರಿಯಲ್ಲಿ ವಜಾಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.