ADVERTISEMENT

ಉಪ ಲೋಕಾಯುಕ್ತರು ನಿಮಗೆ ಹೇಳಬೇಕಾ? ಎಪಿಎಂಸಿ ಅಧಿಕಾರಿಗಳಿಗೆ ಶಿವಾನಂದ ಪಾಟೀಲ ತರಾಟೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 14:42 IST
Last Updated 20 ಜನವರಿ 2026, 14:42 IST
ಸಚಿವ ಶಿವಾನಂದ ಪಾಟೀಲ
ಸಚಿವ ಶಿವಾನಂದ ಪಾಟೀಲ   

ಬೆಂಗಳೂರು: ‘ರೈತರಿಗೆ ಕುಡಿಯುವ ನೀರು ಕೊಡಿ, ಶೌಚಾಲಯ ವ್ಯವಸ್ಥೆ ಮಾಡಿ ಎಂದು ಉಪ ಲೋಕಾಯುಕ್ತರು ನಿಮಗೆ ಹೇಳಬೇಕಾ?, ನಿಮ್ಮ ಕರ್ತವ್ಯ ನಿಮಗೆ ಗೊತ್ತಿಲ್ಲವೇ’ ಎಂದು ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು, ಅಸಮರ್ಥ ಅಧಿಕಾರಿಗಳನ್ನು ಬದಲಾಯಿಸಲು ಸೂಚಿಸಿದರು.

ಬೆಂಗಳೂರು ಮತ್ತು ಮೈಸೂರು ವಿಭಾಗದ ಎಪಿಎಂಸಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕೆಲವು ಎಪಿಎಂಸಿಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಅಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೂಕದ ಯಂತ್ರಗಳು ಸರಿಯಾಗಿಲ್ಲ, ದಲ್ಲಾಳಿಗಳು ರೈತರಿಂದ ಹೆಚ್ಚುವರಿ ಕಮಿಷನ್‌ ಪಡೆಯುತ್ತಿದ್ದಾರೆ ಎಂದಿದ್ದಾರೆ. ಲೋಪಗಳನ್ನು ತಿಳಿಸಿದ ನಂತರವೂ ಸರಿಪಡಿಸಿಕೊಳ್ಳದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

‘ರೈತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ. ಹಲವು ಸೇವೆಗಳನ್ನು ಒದಗಿಸಲು ಹೊರ ಗುತ್ತಿಗೆ ನೀಡಿದ್ದು, ಪ್ರತಿ ತಿಂಗಳು ಸಕಾಲಕ್ಕೆ ಅವರಿಗೆ ಹಣ ಪಾವತಿ ಮಾಡುತ್ತೀರಿ. ಆದರೆ ಅವರಿಂದ ಕೆಲಸ ಪಡೆಯುವುದು ಯಾರ ಜವಾಬ್ದಾರಿ. ಅದರ ಅರಿವು ನಿಮಗಿಲ್ಲವೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

‘ಮಳಿಗೆಗಳು, ಗೋದಾಮುಗಳು ಸೇರಿದಂತೆ ಆರ್‌ಐಡಿಎಫ್‌ ಯೋಜನೆ ಅಡಿ ನಿರ್ಮಾಣ ಮಾಡಿರುವ ಆಸ್ತಿಗಳನ್ನು ಬಳಕೆ ಮಾಡದೇ ಇದ್ದುದರಿಂದ ಆಗಿರುವ ನಷ್ಟವನ್ನು ಎಪಿಎಂಸಿ ಅಧಿಕಾರಿಗಳಿಂದ ವಸೂಲು ಮಾಡಿ’ ಎಂದು ಶಿವಾನಂದ ಪಾಟೀಲ ಸೂಚಿಸಿದರು.

‘ಕೆಲವು ಎಪಿಎಂಸಿಗಳಲ್ಲಿ ಹುದ್ದೆಗಳು ಖಾಲಿ ಇವೆ. ನಿವೃತ್ತಿ ಅಂಚಿನಲ್ಲಿರುವವರು ರಜೆ ಮೇಲೆ ಹೋಗಿದ್ದಾರೆ. ಅಂತಹ ಕಡೆ ತಕ್ಷಣ ನೇಮಕ ಮಾಡಿ. ನಿವೃತ್ತಿ ಸಮೀಪ ಇರುವ ಕಾರಣಕ್ಕೆ ರಜೆ ಮೇಲೆ ಇರುವವರನ್ನು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿ. ಅವರು ಕೇಂದ್ರ ಕಚೇರಿಯಲ್ಲೇ ನಿವೃತ್ತಿ ಪಡೆಯಲಿ. ಅವರ ಅನುಕೂಲಕ್ಕಾ‌ಗಿ ರೈತರಿಗೆ ಸಮಸ್ಯೆ ಆಗಬಾರದು’ ಎಂದರು.

ಪ್ರಗತಿ ವಿವರ ನೀಡಿದ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ ಅವರು, ‘ಪ್ರಗತಿ ಗುರಿ ಸಾಮಾನ್ಯವಾಗಿ ಪ್ರತಿವರ್ಷ ಶೇ 10ರಷ್ಟು ಹೆಚ್ಚಿರುತ್ತದೆ. ಆದರೆ ನಮ್ಮ ಗುರಿ ಶೇ 40ರಷ್ಟಿದೆ. ಈ ಗುರಿ ತಲುಪುವ ವಿಶ್ವಾಸ ಇದೆ’ ಎಂದರು. ಸಹಕಾರ ಇಲಾಖೆ ಕಾರ್ಯದರ್ಶಿ ಸಂಜಯ್‌ ಶೆಟ್ಟಣ್ಣನವರ್‌ ಉಪಸ್ಥಿತರಿದ್ದರು.