ADVERTISEMENT

ಕೊಡಗು | ಕಾಫಿ ನಾಡಿನಲ್ಲಿ ಶಿವನ ಸ್ಮರಣೆ, ಜಾಗರಣೆ

ಮಡಿಕೇರಿಯ ಓಂಕಾರೇಶ್ವರ, ವೀರಭದ್ರಮುನೀಶ್ವರ ದೇವಾಲಯದಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 20:30 IST
Last Updated 21 ಫೆಬ್ರುವರಿ 2020, 20:30 IST
ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿ ಶಿವರಾತ್ರಿ ಅಂಗವಾಗಿ ದೇವರ ದರ್ಶನಕ್ಕೆ ಸರದಿಯಲ್ಲಿ ನಿಂತಿದ್ದ ಭಕ್ತರು
ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿ ಶಿವರಾತ್ರಿ ಅಂಗವಾಗಿ ದೇವರ ದರ್ಶನಕ್ಕೆ ಸರದಿಯಲ್ಲಿ ನಿಂತಿದ್ದ ಭಕ್ತರು   

ಮಡಿಕೇರಿ: ಕಾಫಿ ನಾಡು ಕೊಡಗಿನಲ್ಲಿ ಶುಕ್ರವಾರ ಮಹಾಶಿವರಾತ್ರಿಯ ಸಂಭ್ರಮ ಮನೆ ಮಾಡಿತ್ತು. ಜಿಲ್ಲೆಯ ಬಹುತೇಕ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿತು.

ಸೋಮವಾರಪೇಟೆ, ಕುಶಾಲನಗರ, ಶನಿವಾರಸಂತೆ ಭಾಗದಲ್ಲೂ ಹಬ್ಬದ ಸಂಭ್ರಮವಿತ್ತು.

ನಗರದ ಓಂಕಾರೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 6ರಿಂದಲೇ ವಿಶೇಷ ಪೂಜೆಗಳು ನಡೆದವು. ಬೆಳಿಗ್ಗೆ 9ರಿಂದ ರುದ್ರ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಬಿಲ್ವಪತ್ರದ ಅರ್ಚನೆ ಮಾಡಿಸಿ, ಭಕ್ತರು ಧನ್ಯತಾಭಾವ ತೋರಿದರು.

ADVERTISEMENT

ದೇಗುಲದ ಒಳ ಆವರಣದಲ್ಲಿ ಹೋಮ ಕುಂಡಗಳನ್ನು ನಿರ್ಮಿಸಲಾಗಿತ್ತು. ಸರದಿಯಲ್ಲಿ ಭಕ್ತರು ನಿಂತು ಪ್ರಾರ್ಥಿಸಿದರು. ಬೆಳಿಗ್ಗೆಯಿಂದ ರಾತ್ರಿಯ ತನಕವೂ ಭಕ್ತರ ದಂಡು ಕರಗಲಿಲ್ಲ.

ನಗರದ ಓಂಕಾರೇಶ್ವರ, ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ, ವೀರಭದ್ರಮುನಿಶ್ವರ, ಕುಂದೂರುಮೊಟ್ಟೆ ಚೌಡೇಶ್ವರಿ, ರಾಜರಾಜೇಶ್ವರಿ ದೇವಾಲಯ ಸೇರಿದಂತೆ ವಿವಿಧೆಡೆ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಶಿವರಾತ್ರಿ ಹಿನ್ನೆಲೆಯಲ್ಲಿ ದೇವಾಲಯವನ್ನು ಹಸಿರು ತೋರಣ ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಕರ್ಣಂಗೇರಿಯ ರಾಜರಾಜೇಶ್ವರಿ ಸನ್ನಿಧಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿ ಇಂದು ಮಹಾದೇವನಿಗೆ ಹಾಲು, ನೀರು, ತುಪ್ಪ, ಜೇನು, ಎಳನೀರು, ಫಲ ಪುಷ್ಪಗಳಿಂದ ಭಕ್ತರು ಅಭಿಷೇಕ ಮಾಡಿದರು. ಇಲ್ಲಿರುವ 52 ಅಡಿ ಎತ್ತರದ ಬೃಹತ್ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಹಾಶಿರಾತ್ರಿ ಪ್ರಯುಕ್ತ ಮಡಿಕೇರಿಯ ಮುನೀಶ್ವರ ದೇವಾಲಯದಲ್ಲಿ ಶಂಖದ ಶಿವಲಿಂಗ ನಿರ್ಮಾಣ ಮಾಡಲಾಗಿತ್ತು. ಸುಮಾರು 5,555 ಶಂಖವನ್ನು ಬಳಸಿ ಶಿವಲಿಂಗವನ್ನು ತಯಾರಿಸಲಾಗಿದ್ದು ಆಕರ್ಷಣೆ ಆಗಿತ್ತು. ಕಳೆದ ಐದು ವರ್ಷದಿಂದ ವಿಳ್ಯದೆಲೆ, ಅಡಿಕೆ ಇತ್ಯಾದಿಗಳಿಂದ ಶಿವಲಿಂಗವನ್ನು ದೇವಾಲಯದ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಶಂಖವನ್ನು ಬಳಸಿದ ಶಿವಲಿಂಗ ನೋಡುಗರ ಗಮನ ಸೆಳೆಯಿತು.

ಮುನೀಶ್ವರ ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮಹಾಗಣಪತಿ ಹೋಮ, ವೀರಭದ್ರ ಉತ್ಸವ ಮೂರ್ತಿಯ ಶೋಭಾಯಾತ್ರೆ ನಡೆಯಿತು.

ಶೋಭಾಯಾತ್ರೆ ದೇವಾಲಯದಿಂದ ಆರಂಭವಾಗಿ ಗಣಪತಿ ಬೀದಿ, ಬನ್ನಿಮಂಟಪ, ಮಹಾದೇವಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ಜೂನಿಯರ್ ಕಾಲೇಜು ರಸ್ತೆ ಮಾರ್ಗವಾಗಿ ದೇವಾಲಯಕ್ಕೆ ತೆರಳಲಿತು. ಮಧ್ಯಾಹ್ನ 12ಕ್ಕೆ ಮಹಾಪೂಜೆಯ ನಂತರ ಅನ್ನಸಂತರ್ಪಣೆ, ಸಂಜೆ 6ರಿಂದ ಶನಿವಾರ ಬೆಳಿಗ್ಗೆಯವರೆಗೆ ವಿಶೇಷ ಪೂಜೆ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.