ADVERTISEMENT

₹ 75,393 ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವಗಳಿಗೆ ಒಪ್ಪಿಗೆ

₹8 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಫಾಕ್ಸ್‌ಕಾನ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 16:17 IST
Last Updated 20 ಮಾರ್ಚ್ 2023, 16:17 IST
   

ಬೆಂಗಳೂರು: ಐಫೋನ್‌ ಉತ್ಪಾದಿಸುವ ಪ್ರಮುಖ ಗುತ್ತಿಗೆದಾರ ಕಂಪನಿಯಾಗಿರುವ ಫಾಕ್ಸ್‌ಕಾನ್‌ ಸೇರಿದಂತೆ 18 ಕಂಪನಿಗಳು ರಾಜ್ಯದಲ್ಲಿ ₹ 75,393.57 ಕೋಟಿ ಮೊತ್ತದ ಹೂಡಿಕೆ ಮಾಡಲು ಸಲ್ಲಿಸಿದ್ದ ಪ್ರಸ್ತಾವಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ (ಎಸ್‌ಎಚ್‌ಎಲ್‌ಸಿಸಿ) ಸಭೆ ಅನುಮೋದನೆ ನೀಡಿದೆ.

ಈ ಪ್ರಸ್ತಾವಗಳು ಅನುಷ್ಠಾನಕ್ಕೆ ಬಂದರೆ ರಾಜ್ಯದಲ್ಲಿ 77,606 ಉದ್ಯೋಗಗಳು ಸೃಜನೆಯಾಗಲಿವೆ. 10 ಹೊಸ ಯೋಜನೆಗಳು, ಐದು ವಿಸ್ತರಣಾ ಯೋಜನೆಗಳು, ಮೂರು ಹೆಚ್ಚುವರಿ ಹೂಡಿಕೆಯ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ.

ಗುರುಗ್ರಾಮದ ಅಮ್ಹಾಸ್‌ ಆ್ಯಕ್ಟಿವ್‌ ಪ್ರೈವೇಟ್‌ ಲಿಮಿಟೆಡ್‌ ಹಸಿರು ಜಲಜನಕ ಮತ್ತು ಅಮೋನಿಯಾ ಉತ್ಪಾದನೆ ಹಾಗೂ ನವೀಕರಿಸಬಹುದಾದ ಇಂಧನ ಸ್ಥಾವರಗಳ ನಿರ್ಮಾಣದಲ್ಲಿ ₹ 34,020 ಕೋಟಿ ಹೂಡಿಕೆ ಮಾಡಲಿದೆ. ಇದು ಸೋಮವಾರದ ಸಭೆಯಲ್ಲಿ ಒಪ್ಪಿಗೆ ಪಡೆದಿರುವ ಅತ್ಯಧಿಕ ಮೊತ್ತದ ಯೋಜನೆ. ಮಂಗಳೂರು ವಿಶೇಷ ಆರ್ಥಿಕ ವಲಯ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಈ ಕಂಪನಿ ಹೂಡಿಕೆ ಮಾಡಲಿದೆ.

ADVERTISEMENT

ಬೆಂಗಳೂರಿನ ಹ್ಯುನೆಟ್‌ ಪ್ರೈವೇಟ್‌ ಲಿಮಿಟೆಡ್‌ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿ ₹ 9,817 ಕೋಟಿ ವೆಚ್ಚದಲ್ಲಿ ಲೀಥಿಯಂ ಬ್ಯಾಟರಿ ಮತ್ತು ವಿದ್ಯುತ್‌ ಚಾಲಿತ ವಾಹನಗಳ ತಯಾರಿಕಾ ಘಟಕ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಫಾಕ್ಸ್‌ಕಾನ್‌ ಕಂಪನಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳಲ್ಲಿ ₹ 8,000 ಕೋಟಿ ಹೂಡಿಕೆ ಮಾಡುವ ಪ್ರಸ್ತಾವಕ್ಕೆ ಅನುಮೋದನೆ ದೊರಕಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ಹಸಿರು ಜಲಜನಕ, ಎಥೆನಾಲ್‌ ಉತ್ಪಾದನೆ, ಪವನ ವಿದ್ಯುತ್‌ ಸ್ಥಾವರ, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಜೋಡಣೆ, ಲೀಥಿಯಂ ಬ್ಯಾಟರಿ ಉತ್ಪಾದನೆ, ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆ, ಸಿಮೆಂಟ್‌ ಮತ್ತು ಉಕ್ಕು ತಯಾರಿಕಾ ಕಂಪನಿಗಳು ಸಲ್ಲಿಸಿದ್ದ ಹೂಡಿಕೆ ಪ್ರಸ್ತಾವಗಳಿಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಹೂಡಿಕೆಯಿಂದ ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ ವೇಗ ಪಡೆಯಲಿದೆ’ ಎಂದರು.

ಕೈಗಾರಿಕಾ ಸಚಿವ ಮುರುಗೇಶ ಆರ್‌. ನಿರಾಣಿ, ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌. ಗಿರೀಶ್‌, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರಯ್ಯ ಸಭೆಯಲ್ಲಿದ್ದರು.

ಪ್ರಮುಖ ಹೂಡಿಕೆ ಪ್ರಸ್ತಾವಗಳು: ಎಪ್ಸಿಲಾನ್‌ ಸಿ2ಜಿಆರ್‌ ಪ್ರೈವೇಟ್‌ ಲಿಮಿಟೆಡ್‌ (ಸಂಡೂರು– ಆನೋಡ್‌ ಉತ್ಪನ್ನ) – ₹ 8350 ಕೋಟಿ; ಆಲ್ಟ್ರಾ ಸಿಮೆಂಟ್‌ ಲಿಮಿಟೆಡ್‌ (ಚಿತ್ತಾಪುರ– ಸಿಮೆಂಟ್‌ ಉತ್ಪಾದನೆ)– ₹ 2,670 ಕೋಟಿ; ಅಯನಾ ರಿನಿವಬಲ್‌ ಪವರ್‌ ಸಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಗದಗ ಮತ್ತು ಮುಂಡರಗಿ–ಪವನ ವಿದ್ಯುತ್‌)– ₹ 2,200 ಕೋಟಿ; ರಾಮ್ಕೋ ಸಿಮೆಂಟ್ಸ್‌ ಲಿಮಿಟೆಡ್‌ (ಚಿತ್ತಾಪುರ– ಸಿಮೆಂಟ್‌ ಉತ್ಪಾದನೆ)– ₹ 2,000 ಕೋಟಿ; ಟ್ರವಾಲ್ಟ್‌ ಬಯೋ ಎನರ್ಜಿ ಲಿಮಿಟೆಡ್‌ (ಚಿತ್ತಾಪುರ– ಎಥೆನಾಲ್‌ ಉತ್ಪಾದನೆ)– ₹ 1,821.41 ಕೋಟಿ.

ಎಸ್‌.ಎಲ್‌.ಆರ್‌. ಮೆಟಲಿಕ್ಸ್‌ ಲಿಮಿಟೆಡ್‌ (ಹಗರಿಬೊಮ್ಮನಹಳ್ಳಿ– ಉಕ್ಕು ಉತ್ಪಾದನೆ)– ₹ 1,500 ಕೋಟಿ; ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಲಿಮಿಟೆಡ್‌ (ವೇಮಗಲ್‌, ಯಲಹಂಕ ಮತ್ತು ಎಲೆಕ್ಟ್ರಾನಿಕ್‌ ಸಿಟಿ– ಏರೋಸ್ಪೇಸ್‌ ಮತ್ತು ರಕ್ಷಣಾ ವಲಯದ ಉದ್ದಿಮೆಗಳು)– ₹ 1,030 ಕೋಟಿ; ಅಡ್ವಾನ್ಸ್ಡ್‌ ಪ್ಯಾಕೇಜ್‌ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ (ಮೈಸೂರು– ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್‌ ಉತ್ಪನ್ನಗಳ ಜೋಡಣೆ)– ₹ 1,000 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.