ADVERTISEMENT

25ನೇ ವಯಸ್ಸಿಗೇ ಎಸಿಯಾದ ಶ್ರವಣ್‌

ಕೆಪಿಎಸ್‌ಸಿಯಲ್ಲಿ ಯುವ ಎಂಜಿನಿಯರ್‌ ಸಾಧನೆ

ಎಂ.ಮಹೇಶ
Published 24 ಡಿಸೆಂಬರ್ 2019, 11:05 IST
Last Updated 24 ಡಿಸೆಂಬರ್ 2019, 11:05 IST
ಶ್ರವಣ್ ನಾಯ್ಕ್
ಶ್ರವಣ್ ನಾಯ್ಕ್   

ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಯಲ್ಲಿ ಇಲ್ಲಿನ ಸದಾಶಿವ ನಗರದ ದೂರವಾಣಿ ಕಾಲೊನಿಯ ನಿವಾಸಿ ಶ್ರವಣ್ ನಾಯ್ಕ್ ಉತ್ತಮ ಅಂಕಗಳನ್ನು ಗಳಿಸಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ. 25 ವರ್ಷ ವಯಸ್ಸಿನ ಅವರು ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿ ಸಾಧನೆ ತೋರಿದ್ದಾರೆ.

ಸರ್ಕಾರಿ ನೌಕರ (ಸರ್ವೇಯರ್‌) ನೀಲಕಂಠ ನಾಯ್ಕ್ ಹಾಗೂ ಸುರೇಖಾ ದಂಪತಿಯ ಪುತ್ರರಾದ ಶ್ರವಣ್, ಬಿ.ಕೆ. ಮಾಡೆಲ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಆರ್‌ಎಲ್‌ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದರು. ನಗರದ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್‌ ಅಂಡ್ ಎಲೆಕ್ಟ್ರಾನಿಕ್ಸ್‌ ಪದವಿ ಪಡೆದಿದ್ದಾರೆ. ಎಂಜಿನಿಯರಿಂಗ್‌ ಪದವಿಯ ಹಿನ್ನೆಲೆಯ ಅವರು, ಸಮಾಜ ಸೇವೆಗೆ ಹಂಬಲಿಸಿ ಕೆಪಿಎಸ್‌ಸಿ ‍ಪರೀಕ್ಷೆ ತೆಗೆದುಕೊಂಡಿದ್ದರು.

ಎಂಜಿನಿಯರಿಂಗ್ ಕೋರ್ಸ್‌ ಮುಗಿಯುತ್ತಿದ್ದಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಹೈದರಾಬಾದ್‌ನಲ್ಲಿ ಕೋಚಿಂಗ್‌ಗೆ ಸೇರಿದ್ದರು. ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಹೆಸ್ಕಾಂನಿಂದ ನಡೆಸಿದ್ದ ಎಇಇ ಹಾಗೂ ಎಇ ಪರೀಕ್ಷೆಗೂ ಹಾಜರಾಗಿದ್ದರು. ಆದರೆ, ಯಶಸ್ಸು ಸಿಕ್ಕಿರಲಿಲ್ಲ. ಈ ನಡುವೆ, ಪ್ರಿಲಿಮ್ಸ್‌ಗೆ ಕೇವಲ ತಿಂಗಳಷ್ಟೇ ಸಮಯವಿದ್ದಾಗ ಓದಿದ ಕೆಪಿಎಸ್‌ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿ, ಹುದ್ದೆ ತಮ್ಮದಾಗಿಸಿಕೊಂಡಿದ್ದಾರೆ.

ADVERTISEMENT

ಪೋಷಕರ ಬೆಂಬಲ:

‘ಕೆಪಿಎಸ್‌ಸಿ ಪರೀಕ್ಷೆಗೆ ಕೋಚಿಂಗ್‌ಗೆ ಹೋಗಿರಲಿಲ್ಲ. ಸ್ವಂತವಾಗಿಯೇ ಅಭ್ಯಾಸ ನಡೆಸಿದ್ದೆ. ಪರೀಕ್ಷೆ ಚೆನ್ನಾಗಿ ಮಾಡಿದ್ದೆ. ಯಾವುದಾದರೊಂದು ನೌಕರಿ ಸಿಗಬಹುದು ಎಂಬ ಆತ್ಮವಿಶ್ವಾಸವಂತೂ ಇತ್ತು. ಆದರೆ, ಉಪ ವಿಭಾಗಾಧಿಕಾರಿ ಹುದ್ದೆ ನಿರೀಕ್ಷಿಸಿರಲಿಲ್ಲ. ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಪೋಷಕರ ಬೆಂಬಲದಿಂದ ಇದು ಸಾಧ್ಯವಾಯಿತು’ ಎಂದು ಶ್ರವಣ್ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

‘ನಾಗರಿಕ ಸೇವಾ ಕ್ಷೇತ್ರಕ್ಕೆ ಬರಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು. ಇದಕ್ಕಾಗಿ ಮಾನಸಿಕವಾಗಿ ಸಜ್ಜಾಗಿದ್ದೆ’ ಎಂದು ತಿಳಿಸಿದರು.

‘ನನ್ನ ಕೆಲಸದ ಮೂಲಕ ಬಡವರಿಗೆ ಸಹಾಯ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಅವರಿಗೆ ಅವರ ಹಕ್ಕು ದೊರೆಯುವಂತೆ ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಇಡೀ ವ್ಯವಸ್ಥೆ ಬದಲಾಯಿಸಲು ಆಗುವುದಿಲ್ಲ. ನನ್ನ ಕಚೇರಿಯನ್ನಾದರೂ ಬದಲಿಸಬಹುದಲ್ಲವೇ? ಇದಕ್ಕಾಗಿ ತಂತ್ರಜ್ಞಾನದ ಜ್ಞಾನ ಹಾಗೂ ಎಂಜಿನಿಯರಿಂಗ್‌ ಹಿನ್ನೆಲೆಯನ್ನು ಬಳಸಿಕೊಳ್ಳುತ್ತೇನೆ’ ಎಂದು ತಮ್ಮ ಕನಸುಗಳನ್ನು ಹಂಚಿಕೊಂಡರು.

‘ಕೆಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಮುಖ್ಯವಾಗಿ ತಾಳ್ಮೆ ಇರಬೇಕು. ಕ್ರಮಬದ್ಧವಾಗಿ ಅಭ್ಯಾಸ ಮಾಡಬೇಕು. ಹಿಂದೆಲ್ಲಾ ಮಾಹಿತಿ ಕೊರತೆ ಇರುತ್ತಿತ್ತು. ಈಗ, ಬಹಳಷ್ಟು ಮಾಹಿತಿ ಹಾಗೂ ಸಂಪನ್ಮೂಲ ಲಭ್ಯವಿದೆ. ಇದು ಸವಾಲು ಕೂಡ ಹೌದು. ಏಕೆಂದರೆ, ಎಲ್ಲವನ್ನೂ ಓದಿದರೆ ಏನೂ ನೆನಪಾಗುವುದಿಲ್ಲ ಎನ್ನುವಂಥ ಸ್ಥಿತಿ ಬರಬಹುದು. ಹೀಗಾಗಿ, ಮಾಹಿತಿ ನಿರ್ವಹಣೆಯನ್ನು ಮುಖ್ಯವಾಗಿ ಕಲಿಯಬೇಕಾಗುತ್ತದೆ. ಪರೀಕ್ಷೆಗೆ ಏನು ಬೇಡಿಕೆ ಇದೆಯೋ ಅದನ್ನು ಆದ್ಯತೆ ಮೇಲೆ ಓದಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.