ADVERTISEMENT

ಕೆಪಿಎಸ್‌ಸಿ: ಬೊಮ್ಮಾಯಿಗೆ ಸಿದ್ಧಗಂಗಾಶ್ರೀ ಪತ್ರ

362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಾತಿ ವಿವಾದ: ಮರು ನೇಮಕಾತಿಗೆ ದಾರಿ?

ರಾಜೇಶ್ ರೈ ಚಟ್ಲ
Published 17 ಡಿಸೆಂಬರ್ 2021, 21:17 IST
Last Updated 17 ಡಿಸೆಂಬರ್ 2021, 21:17 IST
ಸಿದ್ಧಲಿಂಗ ಸ್ವಾಮೀಜಿ
ಸಿದ್ಧಲಿಂಗ ಸ್ವಾಮೀಜಿ   

ಬೆಂಗಳೂರು: ವ್ಯಾಪಕ ಭ್ರಷ್ಟಾಚಾರ ನಡೆದಿದೆಯೆಂದು ತೀವ್ರ ವಿವಾದಕ್ಕೆ ಒಳಗಾಗಿದ್ದ 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತುಮಕೂರು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಪತ್ರ ಬರೆದಿದ್ದಾರೆ.

ಈ ಸಾಲಿನ ನೇಮಕಾತಿಯನ್ನು ರದ್ದುಗೊಳಿಸಿ ಹೈಕೋರ್ಟ್‌ 2018ರ ಮಾರ್ಚ್ 9ರಂದು ತೀರ್ಪು ನೀಡಿತ್ತು. ಅದೇ ತೀರ್ಪು ಅನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಆ ಬಳಿಕ, ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನೂ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಇದೀಗ ಸಿದ್ಧಲಿಂಗ ಸ್ವಾಮೀಜಿ ಅವರು ಬರೆದ ಪತ್ರ ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪತ್ರದಲ್ಲಿ ಏನಿದೆ: ‘2011ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ 2020ರ ಬಜೆಟ್‌ ಅಧಿವೇಶನದಲ್ಲಿ ಚರ್ಚೆಯಾಗಿತ್ತು. ಮಂತ್ರಿಮಂಡಲ ಸಭೆಯಲ್ಲಿಯೂ ಚರ್ಚೆ ಮಾಡಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ಇದುವರೆಗೂ ಪ್ರಯೋಜನ ಆಗಿಲ್ಲವೆಂದು ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಿ, ಅಂಗೀಕರಿಸಿ ಅನ್ಯಾಯಕ್ಕೆ ಒಳಗಾದವರಿಗೆ ಅನುಕೂಲ ಮಾಡಿಕೊಟ್ಟರೆ ಸಂತೋಷ’ ಎಂದು ಇದೇ ಡಿ.7ರಂದು ಬರೆದ ಪತ್ರದಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ.

ADVERTISEMENT

ಈ ಪತ್ರದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಕಾರ್ಯದರ್ಶಿಗೆ ಇದೇ 10ರಂದು ಟಿಪ್ಪಣಿ ಕಳುಹಿಸಿರುವ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌, ‘ಸ್ವಾಮೀಜಿಯವರ ಕೋರಿಕೆಯಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯಿಂದ ನಿರ್ದೇಶಿತನಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಮರು ನೇಮಕಾತಿ?: ‘ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷ ಮತ್ತು ಒಂಬತ್ತು ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಿರಲು ಈಗಾಗಲೇ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಆ ಮೂಲಕ, ಈ ಪ್ರಕರಣದಲ್ಲಿ ಸಿಐಡಿ ತನಿಖೆ ನಡೆಸಿ ಸಿದ್ಧಪಡಿಸಿದ್ದ ದೋಷಾರೋಪಟ್ಟಿಯಲ್ಲಿ ಹೆಸರು ಇದ್ದ ಎಲ್ಲ ಆರೋಪಿಗಳಿಗೆ ಸರ್ಕಾರ ಕ್ಲೀನ್‌ ಚಿಟ್‌ ನೀಡಿದೆ. ಇದರಿಂದಾಗಿ ಈ ಸಾಲಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮರು ನೇಮಕಾತಿ ಮಾಡಿಕೊಳ್ಳಲು ದಾರಿ ತೆರೆದುಕೊಂಡಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಡಿಪಿಎಆರ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮಸೂದೆಯೇ, ಸುಗ್ರೀವಾಜ್ಞೆಯೇ?
‘ವಿಶೇಷ ನೇಮಕಾತಿಗೆ ಕಾಯ್ದೆ ರೂಪಿಸಲು ಮಸೂದೆ ಮಂಡಿಸಬೇಕೇ? ಸುಗ್ರೀವಾಜ್ಞೆ ಹೊರಡಿಸಬೇಕೇ? ಎಂಬ ಜಿಜ್ಞಾಸೆ ನಡೆದಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಬಳಿಕ ಸರ್ಕಾರ ತೀರ್ಮಾನಕ್ಕೆ ಬರಲಿದೆ’ ಎಂದು ಮೂಲಗಳು ಹೇಳಿವೆ.

‘ಈ ಸಾಲಿನ ಅಕ್ರಮದಲ್ಲಿ ಭಾಗಿಯಾದ ಕೆಪಿಸಿಸಿ ಅಧ್ಯಕ್ಷ ಮತ್ತು ಒಂಬತ್ತು ಸದಸ್ಯರ ವಿರುದ್ಧದ ಪ್ರಾಸಿಕ್ಯೂಷನ್‌ ಕೈಬಿಡುವಂತೆ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ರಾಜ್ಯ ಸರ್ಕಾರ ನೇರವಾಗಿ ಕಡತ ಸಲ್ಲಿಸಿತ್ತು. ಆದರೆ, ಈ ಕಡತ ರಾಜ್ಯಪಾಲರ ಮೂಲಕವೇ ಸಲ್ಲಿಸಬೇಕು ಎಂದು ಷರಾ ಬರೆದು ಡಿಒಪಿಟಿ ವಾಪಸು ಕಳುಹಿಸಿದೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗೆ ಕಡತ ಸಲ್ಲಿಸಲಾಗಿದೆ. ಅಲ್ಲದೆ, ಈ ಸಾಲಿನ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆಯೂ ನಿರ್ಧಾರಕ್ಕೆ ಬರಲು ಮುಖ್ಯಮಂತ್ರಿಗೆ ಕಡತ ಸಲ್ಲಿಸಲಾಗಿದೆ. ಈಗಾಗಲೇ ಹಲವು ಸಭೆಗಳು ನಡೆದಿವೆ. ಇದೀಗ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದಾದರೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.