ADVERTISEMENT

ಚೆನ್ನೈ ವೈದ್ಯರ ತಂಡದಿಂದ ಸಿದ್ಧಗಂಗಾಶ್ರೀ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 4:11 IST
Last Updated 7 ಡಿಸೆಂಬರ್ 2018, 4:11 IST
ಚೆನ್ನೈನ ಅರಿವಳಿಕೆ ತಜ್ಞ ಡಾ. ಎಲ್.ಎನ್.ಕುಮಾರ್ ಅವರು ಸ್ವಾಮೀಜಿ ಅವರ ಆರೋಗ್ಯ ತಪಾಸಣೆ ಮಾಡಿ ನಿರ್ಗಮಿಸುವಾಗ ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ವರ ಅವರೊಂದಿಗೆ ಸಮಾಲೋಚನೆ ಮಾಡುತ್ತ ಹೊರ ಬಂದ ಕ್ಷಣ
ಚೆನ್ನೈನ ಅರಿವಳಿಕೆ ತಜ್ಞ ಡಾ. ಎಲ್.ಎನ್.ಕುಮಾರ್ ಅವರು ಸ್ವಾಮೀಜಿ ಅವರ ಆರೋಗ್ಯ ತಪಾಸಣೆ ಮಾಡಿ ನಿರ್ಗಮಿಸುವಾಗ ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ವರ ಅವರೊಂದಿಗೆ ಸಮಾಲೋಚನೆ ಮಾಡುತ್ತ ಹೊರ ಬಂದ ಕ್ಷಣ   

ತುಮಕೂರು: ಬುಧವಾರ ರಾತ್ರಿ ಜ್ವರದಿಂದ ಬಳಲಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯವನ್ನು ಮತ್ತಷ್ಟು ಸುಧಾರಣೆಗೊಳಿಸಲು ಚೆನ್ನೈ ಹಾಗೂ ಬೆಂಗಳೂರು ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರ ತಂಡವು ಗುರುವಾರ ರಾತ್ರಿ ತಪಾಸಣೆ ಮಾಡಿತು.

ಸ್ವಾಮೀಜಿ ಅವರಿಗೆ ಈಗಾಗಲೇ 11 ಸ್ಟಂಟ್ ಅಳವಡಿಸಲಾಗಿದ್ದು, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಚಿಕಿತ್ಸೆ ನೀಡುವುದು ಸಂಕೀರ್ಣವಾಗಿದ್ದರಿಂದ ಚೆನ್ನೈನ ಅರಿವಳಿಕೆ ತಜ್ಞ ಡಾ. ಎಲ್.ಎನ್.ಕುಮಾರ್ ನೇತೃತ್ವದ ತಜ್ಞ ವೈದ್ಯರ ತಂಡ ಹಾಗೂ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಅವರ ನೇತೃತ್ವದ ವೈದ್ಯರ ತಂಡವು ಆರೋಗ್ಯ ತಪಾಸಣೆ ನಡೆಸಿತು.

ಚೆನ್ನೈ ವೈದ್ಯರ ತಂಡವು ಚಿಕಿತ್ಸೆ ಕುರಿತು ತಮ್ಮ ಸಲಹೆ ನೀಡಿ ಮಠದಿಂದ ನಿರ್ಗಮಿಸಿತು. ಮುಂದಿನ ಚಿಕಿತ್ಸೆ ಕುರಿತು ತೀರ್ಮಾನ ಕೈಗೊಳ್ಳಲು ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡವು ಮಠದಲ್ಲಿ ಸಮಾಲೋಚನೆಯಲ್ಲಿ ನಿರತವಾಯಿತು.

ADVERTISEMENT

ಸ್ನಾನಕ್ಕೆ ತೆರಳಿದ ಸ್ವಾಮೀಜಿ: ವೈದ್ಯರ ತಂಡವು ಆರೋಗ್ಯ ತಪಾಸಣೆ ಮಾಡಿದ ನಿರ್ಗಮಿಸಿದ ಬಳಿಕ ಸ್ವಾಮೀಜಿಯವರು ಎಂದಿನಂತೆಯೇ ಸ್ನಾನಕ್ಕೆ ತೆರಳಿದರು.

ಪೂಜೆ ನೆರವೇರಿಸಿದ ಸ್ವಾಮೀಜಿ: ಐದು ದಿನಗಳ ಹಿಂದೆ ಬಿಜಿಎಸ್ ಆಸ್ಪತ್ರೆಯಲ್ಲಿ ಎರಡು ಸ್ಟಂಟ್ ಅಳವಡಿಕೆ ಬಳಿಕ ಮಠಕ್ಕೆ ಹಿಂದಿರುಗಿದ್ದ ಸ್ವಾಮೀಜಿ ಆರೋಗ್ಯವಾಗಿದ್ದರು. ಆದರೆ, ಬುಧವಾರ ರಾತ್ರಿ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿಂದ ಬಿಜಿಎಸ್ ಆಸ್ಪತ್ರೆ ಹಾಗೂ ನಗರದ ಸಿದ್ಧಗಂಗಾ ಆಸ್ಪತ್ರೆ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಗುರುವಾರ ಎಂದಿನಂತೆಯೇ ಸ್ವಾಮೀಜಿ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.