ADVERTISEMENT

ವೈರತ್ವ ಇಲ್ಲ, ಸ್ನೇಹವೇ ಎಲ್ಲ: ರಾಜಕೀಯ ಭಿನ್ನಾಭಿಪ್ರಾಯ ಮರೆತ ನಾಯಕರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 20:39 IST
Last Updated 19 ಜನವರಿ 2020, 20:39 IST
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎಚ್. ವಿಶ್ವನಾಥ್, ಸಿದ್ದರಾಮಯ್ಯ ಮತ್ತು ಕೆ.ಎಸ್. ಈಶ್ವರಪ್ಪ ಕುಶಲೋಪರಿಯಲ್ಲಿ ತೊಡಗಿದ್ದ ಕ್ಷಣ –ಪ್ರಜಾವಾಣಿ ಚಿತ್ರ
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎಚ್. ವಿಶ್ವನಾಥ್, ಸಿದ್ದರಾಮಯ್ಯ ಮತ್ತು ಕೆ.ಎಸ್. ಈಶ್ವರಪ್ಪ ಕುಶಲೋಪರಿಯಲ್ಲಿ ತೊಡಗಿದ್ದ ಕ್ಷಣ –ಪ್ರಜಾವಾಣಿ ಚಿತ್ರ   

ಕೆ.ಆರ್.ನಗರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಬಿಜೆಪಿ ಮುಖಂಡ ಎಚ್.ವಿಶ್ವನಾಥ್ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಂದೇ ವೇದಿಕೆಯಲ್ಲಿ ಕುಶಲೋಪರಿಯಲ್ಲಿ ತೊಡಗಿದ್ದ ಕ್ಷಣ ಗಮನ ಸೆಳೆಯಿತು.

ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ‍್ರತಿಮೆ ಅನಾವರಣ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು.

ಅಕ್ಕಪಕ್ಕ ಕುಳಿತು ನಕ್ಕು ನಲಿದರು, ಪರಸ್ಪರ ತಮಾಷೆಯಲ್ಲಿ ತೊಡಗಿದ್ದರು. ಬಿಸ್ಕತ್‌ ಹಂಚಿಕೊಂಡು ತಿಂದು ಕುರುಬ ಸಮುದಾಯದ ಒಗ್ಗಟ್ಟಿನ ಮಂತ್ರ ಜಪಿಸಿದರು. ಇದಕ್ಕೂ ಮೊದಲು ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಬಂದರು.

ADVERTISEMENT

ವಿಶ್ವನಾಥ್ ಮಾತನಾಡಿ, ‘ರಾಜಕಾರಣ ಬರುತ್ತೆ, ಹೋಗುತ್ತೆ. ಕಾವೇರಿ ನದಿ ಹರಿದು ಮುಂದೆ ಸಂಗಮವಾಗುತ್ತದೆ. ಹಾಗೆಯೇ, ಇದೊಂದು ದೊಡ್ಡ ಸಂಗಮ. ಈಶ್ವರಪ್ಪ ಜೊತೆ ಸೇರಿದ ಮೇಲೆ ಬಾಡು ಬಳ್ಳೆ ಬಿಟ್ಟಿದ್ದೇನೆ. ಅವರನ್ನು ಕೆ.ಆರ್.ನಗರದ ನಮ್ಮ ಮನೆಗೆ ಕರೆದುಕೊಂಡು ಹೋಗಿ ಸಸ್ಯಾಹಾರಿ ಊಟ ಬಡಿಸುತ್ತೇನೆ. ಸಿದ್ದರಾಮಯ್ಯ ಇನ್ನೂ ಬಾಡು ಬಳ್ಳೆ ಇಟ್ಟುಕೊಂಡಿದ್ದಾರೆ. ದೊಡ್ಡಕೊಪ್ಪಲು ಗ್ರಾಮದ ರೇವಣ್ಣರ ಮನೆಯಲ್ಲಿ ಹಾವು ಮೀನು, ನಾಟಿ ಕೋಳಿ ಸಾರಿನ ಊಟ ಸೇವಿಸುತ್ತಾರೆ. ಅವರನ್ನು ಬಿಟ್ಟು ವಿಶ್ವನಾಥ್ ಮತ್ತು ಈಶ್ವರಪ್ಪ ಒಟ್ಟಿಗೆ ಊಟಕ್ಕೆ ಹೋದರು ಎಂಬುದಾಗಿ ತಪ್ಪು ಭಾವಿಸಬೇಡಿ’ ಎಂದಾಗ ಸಭಾಂಗಣದಲ್ಲಿ ನಗುವಿನ ಅಲೆ.

ಈಶ್ವರಪ್ಪ ಮಾತನಾಡಿ, ‘ಮೂವರೂ ಒಟ್ಟಿಗೆ ಸೇರಿರುವ ಬಗ್ಗೆ ಕೆಲವರಿಗೆ ಇಂದು ಹೊಟ್ಟೆ ಉರಿದು ಹುಣ್ಣು ಆಗಬಹುದು. ರಾಜಕೀಯ ವಿಚಾರದಲ್ಲಿ ಸಿದ್ದರಾಮಯ್ಯ ನನಗೆ ಬೈದಷ್ಟು ಇನ್ಯಾರಿಗೂ ಬೈದಿಲ್ಲ, ಹಾಗೇ ನಾನೂ ಅವರಿಗೆ ಬೈದಷ್ಟು ಮತ್ಯಾರಿಗೂ ಬೈದಿಲ್ಲ’ ಎಂದರು.

ಸಿದ್ದರಾಮ ಮತ್ತು ವಿಶ್ವನಾಥ ಇಬ್ಬರೂ ಈಶ್ವರನೇ ಆಗಿದ್ದಾರೆ. ಅದರಂತೆ ನಾನೂ ಈಶ್ವರ. ಸ್ನೇಹದಲ್ಲಿ ನಮ್ಮನ್ನು ದೂರ ಮಾಡಲಿಕ್ಕೆ
ಯಾರ ಕೈಯಲ್ಲೂ ಆಗಲ್ಲ ಎಂದು ನುಡಿದರು.

ಸಿದ್ದರಾಮಯ್ಯ ಮಾತನಾಡುವಷ್ಟರಲ್ಲಿ ತುರ್ತು ಕೆಲಸದ ನಿಮಿತ್ತ ವಿಶ್ವನಾಥ್, ಈಶ್ವರಪ್ಪ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.