ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ವಿದೇಶ ಪ್ರವಾಸ

ಸಚಿವ ವೆಂಕಟೇಶ್‌ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಶಾಸಕರಿಂದ ಆಸ್ಟ್ರೇಲಿಯಾ, ನ್ಯೂಜಿಲೇಂಡ್‌ ಪ್ರವಾಸ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 16:35 IST
Last Updated 11 ಫೆಬ್ರುವರಿ 2026, 16:35 IST
<div class="paragraphs"><p>ರೇಷ್ಮೆ ಸಚಿವ ಕೆ. ವೆಂಕಟೇಶ್‌</p></div>

ರೇಷ್ಮೆ ಸಚಿವ ಕೆ. ವೆಂಕಟೇಶ್‌

   

ಬೆಂಗಳೂರು: ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಇದೇ 16ರಿಂದ ಮಾರ್ಚ್‌ 3 ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ಸಚಿವರು ಮತ್ತು ಶಾಸಕರ ಈ ಪ್ರವಾಸವು ರಾಜ್ಯ ರಾಜಕೀಯ ವಲಯದಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಪ್ರವಾಸ ಹೋಗುವವರ ಪಟ್ಟಿಯಲ್ಲಿ ಹಂಪನಗೌಡ ಬಾದರ್ಲಿ, ಬಿ.ದೇವೇಂದ್ರಪ್ಪ, ಯಶವಂತರಾಯ ಗೌಡ ವಿ ಪಾಟೀಲ, ಬಿ.ಎಂ.ನಾಗರಾಜ, ಜೆ.ಟಿ. ಪಾಟೀಲ, ಅಲ್ಲಮಪ್ರಭು ಪಾಟೀಲ, ಸಿ. ಪುಟ್ಟರಂಗಶೆಟ್ಟಿ, ಬಸನಗೌಡ ದದ್ದಲ್‌, ಎ.ಆರ್‌. ಕೃಷ್ಣಮೂರ್ತಿ, ಬಸನಗೌಡ ತುರ್ವಿಹಾಳ, ಎಚ್‌.ಡಿ. ತಮ್ಮಯ್ಯ ಮುಂತಾದವರ ಹೆಸರಿದೆ. 

ಪ್ರವಾಸ ಬಗ್ಗೆ ಖಚಿತಪಡಿಸಿದ ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗ ಶೆಟ್ಟಿ, ‘ಯಾವುದೇ ಸಮಿತಿಯಿಂದ ವಿದೇಶ ಪ್ರವಾಸ ಹೋಗುತ್ತಿಲ್ಲ. ಶಾಸಕರ ವಿದೇಶ ಪ್ರವಾಸದ ನೇತೃತ್ವವನ್ನು ಸಚಿವ ವೆಂಕಟೇಶ್ ವಹಿಸಿದ್ದಾರೆ. ತಂಡದಲ್ಲಿ ಯಾರೆಲ್ಲ ಇದ್ದಾರೆಂದು ಗೊತ್ತಿಲ್ಲ’ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಬಜೆಟ್ ಒಳಗೆ ವಾಪಸ್ ಬರುತ್ತೇವೆ. ಪ್ರವಾಸದ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ಇದ್ದೇ ಇರುತ್ತದೆ’ ಎಂದೂ ಹೇಳಿದರು.

ಡಿ.ಕೆ. ಶಿವಕುಮಾರ್‌ ಅವರ ಸೋದರ ಡಿ.ಕೆ. ಸುರೇಶ್‌ ಪ್ರತಿಕ್ರಿಯಿಸಿ, ‘ಈ ಪ್ರವಾಸವನ್ನು ಶಾಸಕರೇ ಯೋಜಿಸಿರಬಹುದು ಅಥವಾ ಯಾರಾದರೂ ಪ್ರಾಯೋಜಕತ್ವ ವಹಿಸಿರಬಹುದು. ಇದಕ್ಕೂ ಶಿವಕುಮಾರ್‌ ಅವರಿಗೂ ಯಾವುದೇ ಸಂಬಂಧ ಇಲ್ಲ’ ಎಂದರು. ಸುರೇಶ್‌ ಅವರು ಸಿದ್ದರಾಮಯ್ಯ ಬೆಂಬಲಿಗರನ್ನು ಗುರಿಯಾಗಿಸಿ ‘ಯಾರಾದರೂ ಪ್ರಾಯೋಜಕತ್ವ ವಹಿಸಿರಬಹುದು’ ಎಂದು ಹೇಳಿರಬೇಕೆಂಬ ವಿಶ್ಲೇಷಣೆಯೂ ಕಾಂಗ್ರೆಸ್‌ ವಲಯದಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.