ADVERTISEMENT

ಹಿಂದಿ ರಾಷ್ಟ್ರಭಾಷೆ ಎಂಬ ಭ್ರಮೆಯಿಂದ ಹೊರಬನ್ನಿ: ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2022, 8:42 IST
Last Updated 6 ಆಗಸ್ಟ್ 2022, 8:42 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ‘ಬಿಜೆಪಿ ನಾಯಕರೇ, ನಾನೊಬ್ಬ ಕನ್ನಡಿಗ ಎಂಬ ಸ್ವಾಭಿಮಾನವನ್ನು ನೀವೇ ಬೆಳೆಸಿಕೊಳ್ಳಬೇಕು, ಇದು ನಾವು ಹೇಳಿ ಬರುವಂಥದ್ದಲ್ಲ. ಹಿಂದಿ ರಾಷ್ಟ್ರಭಾಷೆ ಎಂಬ ಭ್ರಮೆಯಿಂದ ಹೊರಬನ್ನಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ‘ಹರ್‌ ಘರ್‌ ತಿರಂಗ’ ಅಭಿಯಾನವನ್ನು ಹಿಂದಿಯಲ್ಲಿ ಉಲ್ಲೇಖಿಸಿದ್ದರ ವಿರುದ್ಧ ಸಿದ್ದರಾಮಯ್ಯ ಅವರು ಶುಕ್ರವಾರ ಸರಣಿ ಟ್ವೀಟ್‌ ಮಾಡಿ ಟೀಕಿಸಿದ್ದರು.

ADVERTISEMENT

‘ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ? ಅಥವಾ ಹಿಂದಿ‌ ಮತ್ತು ಸಂಸ್ಕೃತಿ ಇಲಾಖೆಯೇ? ಎನ್ನುವುದನ್ನು ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್‌ ಕುಮಾರ್‌ ಅವರು ಸ್ಪಷ್ಟಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದರು.

ಅಲ್ಲದೇ, ‘ಕನ್ನಡ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು‌ ಪೋಷಣೆಗಾಗಿ ಇರುವ ಇಲಾಖೆಯೇ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಹೊರಗಿಟ್ಟು ಹಿಂದಿ ಭಾಷೆಯ ಪ್ರಚಾರಕ್ಕೆ ಇಳಿದರೆ ಕನ್ನಡ ಭಾಷೆಯನ್ನು ರಕ್ಷಿಸುವವರು ಯಾರು’ ಎಂದು ಪ್ರಶ್ನೆ ಮಾಡಿದ್ದರು.

ಈ ಮಧ್ಯೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿದ್ದ ಹಿಂದಿ ಉಲ್ಲೇಖವನ್ನು ತೆಗೆದಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು, ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

‘ನಾನು ಚಾಟಿ ಬೀಸಿದ ನಂತರ ಸರ್ಕಾರ ಎಚ್ಚೆತ್ತುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿ ಅನಗತ್ಯವಾಗಿ ತುರುಕಿದ್ದ ಹಿಂದಿಯನ್ನು ಕಿತ್ತೊಗೆದಿದೆ. ಬಿಜೆಪಿ ನಾಯಕರೇ, ನಾನೊಬ್ಬ ಕನ್ನಡಿಗ ಎಂಬ ಸ್ವಾಭಿಮಾನವನ್ನು ನೀವೇ ಬೆಳೆಸಿಕೊಳ್ಳಬೇಕು, ಇದು ನಾವು ಹೇಳಿ ಬರುವಂಥದ್ದಲ್ಲ. ಹಿಂದಿ ರಾಷ್ಟ್ರಭಾಷೆ ಎಂಬ ಭ್ರಮೆಯಿಂದ ಹೊರಬನ್ನಿ’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.