ADVERTISEMENT

ಜೆಡಿಎಸ್‌ನವರು ಅಧಿಕಾರಕ್ಕೆ ಬರುವ ಗಿರಾಕಿಗಳಲ್ಲ: ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 19:22 IST
Last Updated 26 ಸೆಪ್ಟೆಂಬರ್ 2021, 19:22 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡ    

ಬೆಂಗಳೂರು: ‘ಜೆಡಿಎಸ್‌ನವರು ಅಧಿಕಾರಕ್ಕೆ ಬರುವ ಗಿರಾಕಿಗಳಲ್ಲ. 30 ಸೀಟ್‌ನಲ್ಲೇ ಸಿಕ್ಕ ಸಿಕ್ಕವರ ಜೊತೆ ಹೋಗುವವರು, ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಜೆಡಿಎಸ್ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ದಿನಸಿ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು (ಕಾಂಗ್ರೆಸ್‌) ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಏಳು ಕೆಜಿಯಲ್ಲ. ಹತ್ತು ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ. ಮತ್ತೆ ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ’ ಎಂದರು.

‘ನಾನು ಏಳು ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೆ. ಕುಮಾರಸ್ವಾಮಿ ಕೊಟ್ಟಿದ್ರಾ, ಯಡಿಯೂರಪ್ಪ ಕೊಟ್ಟಿದ್ರಾ, ಈಗ ಬೊಮ್ಮಾಯಿ ಕೊಡುತ್ತಿದ್ದಾರಾ? ಈಗ ಕಡಿಮೆ ಅಕ್ಕಿ ಕೊಡುತ್ತಿದ್ದಾರೆ. ಇವರೇನು ಇವರಪ್ಪನ ಮನೆಯಿಂದ ಕೊಡುತ್ತಾರಾ. ಬಡವರಿಗೆ ಅಕ್ಕಿ ಕೊಡಲು ಯಾಕೆ ಹೊಟ್ಟೆ ಉರಿ. ನಾನೇನು ನಮ್ಮಪ್ಪನ‌ ಮನೆಯಿಂದ ಕೊಟಿದ್ದೀನಾ? ಯಡಿಯೂರಪ್ಪ ರಾಜಾಹುಲಿಯಂತೆ. ಅತ್ಯುತ್ತಮ ಶಾಸಕನಂತೆ. ಯಾಕೆ ಇಂದಿರಾ ಕ್ಯಾಂಟೀನ್ ಮುಚ್ಚಿದ್ದಕ್ಕಾ? ಯಡಿಯೂರಪ್ಪ ಎರಡು ವರ್ಷ ಮುಖ್ಯಮಂತ್ರಿ ಆಗಿದ್ದರು. ಲೂಟಿ‌ ಹೊಡೆಯುವುದು ಬಿಟ್ಟರೆ ಬೇರೆ ಏನೂ ಮಾಡಿಲ್ಲ’ ಎಂದು ಅವರು ಕಿಡಿಕಾರಿದರು.

ADVERTISEMENT

‘ಸಿದ್ದರಾಮಯ್ಯ ಪರಾವಲಂಬಿ ಸಸ್ಯ ’

‘ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಜೆಡಿಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, 'ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯದ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಗುಣ ಯಾರದ್ದು ಎಂಬುದನ್ನು ಜನ ಬಲ್ಲರು. ಪರಾವಲಂಬಿ ರಾಜಕಾರಣ ಅವರ ನೈಜಗುಣ. ನೇರ ರಾಜಕಾರಣ ಅವರ ರಕ್ತದಲ್ಲೇ ಇಲ್ಲ. ಜೆಡಿಎಸ್ ಅನ್ನ-ಗೊಬ್ಬರದಿಂದ ಬೆಳೆದ ಸಿದ್ದರಾಮಯ್ಯ, ಈಗ ಅದೇ ಬಲದಿಂದ ಕಾಂಗ್ರೆಸ್ ಪಕ್ಷವನ್ನೇ ನುಂಗುತ್ತಿದ್ದಾರೆ. ಆ ಪಕ್ಷದ ದಿಗ್ಗಜ ನಾಯಕರನ್ನೇ ಬಲಿ ತೆಗೆದುಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

'ಜೆಡಿಎಸ್ ಅವರಿವರ ಜತೆ ಹೋಗುವ ಪಕ್ಷ ಎಂದು ಸಿದ್ದರಾಮಯ್ಯ ಹೇಳಿರುವುದು ಅವರ ರಾಜಕೀಯ ಪ್ರಜ್ಞೆಯ ದಿವಾಳಿತನವಷ್ಟೆ. 2018ರಲ್ಲಿ ದೇವೇಗೌಡರ ಮನೆ ಬಾಗಿಲಿಗೆ ಬಂದವರು ಯಾರು’ ನನ್ನನ್ನು ಮುಖ್ಯಮಂತ್ರಿ ಮಾಡಿ ಕೊನೆಗೆ ಕೈಕೊಟ್ಟು ಆ ಸರ್ಕಾರದ ಪತನಕ್ಕೆ ʼಕಾರಣಪುರುಷರುʼ ಯಾರು? ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ’ ಎಂದಿದ್ದಾರೆ.

‘ಎಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿ, ಅವರಿಗೆ ಕೈಕೊಟ್ಟವರು ಯಾರು ಎಂಬುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರೇ ಸುಮ್ಮನೆ ನಮ್ಮನ್ನು ಕೆಣಕಬೇಡಿ. ಜೆಡಿಎಸ್ ಚಿಕ್ಕ ಪಕ್ಷವಿರಬಹುದು, ಅದರ ಶಕ್ತಿಯನ್ನು ಕಡೆಗಣಿಸಬೇಡಿ. ಕರ್ನಾಟಕ ರಾಜಕಾರಣದಲ್ಲಿ ಪರಾವಲಂಬಿ ಸಸ್ಯ ನೀವು. ಪಕ್ಷಗಳನ್ನು ಒಡೆಯುವ ನಿಮ್ಮ ‘ಸಿದ್ದಕಲೆʼ ರಾಜ್ಯಕ್ಕೆ ಹೊಸತೇನಲ್ಲ‘ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಜಾತಿ ಸಮೀಕ್ಷೆ ಹೇಳಿಕೆ ಪ್ರಚಾರಕ್ಕೆ ಸೀಮಿತ’

ರಾಮನಗರ: ‘ಜಾತಿ ಸಮೀಕ್ಷೆ ಬಗ್ಗೆ ಸದನದಲ್ಲಿ ಮಾತನಾಡುವುದನ್ನು ಬಿಟ್ಟು‌ ಬೀದಿಯಲ್ಲಿ ಮಾತನಾಡುವುದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಬಿಡದಿಯಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಹತ್ತು ದಿನಗಳ ಕಾಲ ಸದನ ನಡೆದಿತ್ತು. ಸದನದಲ್ಲಿ ನಿಯಮ 69ರಲ್ಲಿ ಈ ವಿಚಾರವನ್ನು ಚರ್ಚೆಗೆ ತರಬಹುದಿತ್ತು. ಈ ಮೂಲಕ ರಾಜ್ಯದ ಜನತೆ ಮುಂದೆ ಸತ್ಯ ತೆರೆದಿಡಬಹುದಿತ್ತು. ಆದರೆ ಅವರಿಗೆ ಅದರ ಅವಶ್ಯಕತೆ ಇಲ್ಲ‌. ಜಾತಿ ಸಮೀಕ್ಷೆ ಕೇವಲ‌ ಪ್ರಚಾರಕ್ಕೆ ಬೇಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.