ADVERTISEMENT

ನೋಟು ರದ್ದತಿ | ಬಡ ಜನರ ಬದುಕು ಕಸಿದುಕೊಂಡ ದಿನ ಎಂದ ಸಿದ್ದರಾಮಯ್ಯ

ಪ್ರಧಾನಿ ಮೋದಿ, ಕೇಂದ್ರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 11:21 IST
Last Updated 8 ನವೆಂಬರ್ 2019, 11:21 IST
ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ
ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ   

ಬೆಂಗಳೂರು:ನೋಟು ರದ್ದತಿನಿರ್ಧಾರಕ್ಕೆ ಮೂರು ವರ್ಷಗಳಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಆರ್ಥಿಕತೆಗೆ ಸಂಬಂಧಿಸಿ ಇತ್ತೀಚೆಗೆ ‘ಪ್ರಜಾವಾಣಿ’ ಪ್ರಕಟಿಸಿರುವ ಕೆಲವು ವರದಿಗಳ ಪ್ರತಿಗಳನ್ನು ಲಗತ್ತಿಸಿ ಸರಣಿ ಟ್ವೀಟ್ ಮಾಡಿರುವ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

‘ಈ ದಿನವನ್ನು ನೋಟು ನಿಷೇಧಗೊಂಡ ದಿನ ಎನ್ನುವುದಕ್ಕಿಂತ, ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಕಸಿದುಕೊಂಡ ದಿನವೆನ್ನುವುದೇ ಸೂಕ್ತ. ಅಂದು ಬ್ಯಾಂಕುಗಳ ಮುಂದಿನ ಸರತಿ ಸಾಲಿನಲ್ಲಿ ಆರಂಭಗೊಂಡ ಸಾವಿನ ಸರಪಳಿ ಇಂದಿಗೂ ಜನರ ವ್ಯಾಪಾರ, ಉದ್ಯೋಗವನ್ನು ಕಸಿದುಕೊಳ್ಳುತ್ತಾ ಬಡಜನರ ಬಲಿ ಪಡೆಯುತ್ತಲೇ ಇದೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ನೋಟು ನಿಷೇಧದ ನಂತರ ಇಳಿಕೆಯ ಹಾದಿ ಹಿಡಿದಿದ್ದ ದೇಶದ ಜಿಡಿಪಿ ದರ ಈಗ ಕೋಮಾ ಸ್ಥಿತಿಯಲ್ಲಿದೆ. ಪ್ರಸಕ್ತ ವರ್ಷದ ಜಿಡಿಪಿ ಶೇ 5 ರಷ್ಟಿದ್ದು, ಇದು ಹಿಂದಿನ 7 ವರ್ಷಗಳಲ್ಲೇ ಅತ್ಯಂತ ಕನಿಷ್ಠದ್ದಾಗಿದೆ. ದೇಶದ ವಿತ್ತ ಸಚಿವರ ಪತಿಯೇ ಸರ್ಕಾರದ ಆಡಳಿತ ನೀತಿಗಳ ವೈಫಲ್ಯ ಕುರಿತು ಲೇಖನ ಬರೆದಿರುವುದು ಗಮನಾರ್ಹ ವಿಚಾರ. #DeMonetisationDisaster’ ಇನ್ನೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ‘ನೋಟು ರದ್ದತಿಯ ನಂತರ ಕುಂಟುತ್ತಾ ಸಾಗುತ್ತಿದ್ದ ಸೇವಾ ವಲಯದ ಪ್ರಗತಿ, ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕ ಆರಂಭದಲ್ಲಿಯೇ ತೀವ್ರ ಕುಸಿತದ ಹಾದಿ ಹಿಡಿದಿದೆ. ನಿರಂತರ ಏರಿಕೆ ಕಾಣುತ್ತಿರುವ ಕಚ್ಚಾ ಸಾಮಾಗ್ರಿಗಳ ಬೆಲೆ ಸೇರಿದಂತೆ ನೋಟು ರದ್ದತಿಯ ದುಷ್ಪರಿಣಾಮಗಳು ಇದಕ್ಕೆ ಮುಖ್ಯ ಕಾರಣ’ ಎಂದು ಉಲ್ಲೇಖಿಸಿದ್ದಾರೆ.

‘ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುವ ನರೇಂದ್ರ ಮೋದಿಯವರು, ಬಾಲಾಕೋಟ್ ದಾಳಿಯ ಶ್ರೇಯವನ್ನು ಮಾತ್ರ ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಂಡಿದ್ದು ವಿಪರ್ಯಾಸ. ರಿಸರ್ವ್ ಬ್ಯಾಂಕಿನ ಅನುಮತಿಯಿಲ್ಲದೆ ಸರ್ಕಾರ ನೋಟು ನಿಷೇಧಿಸಿದ್ದರಿಂದ ಆದ ಅನಾಹುತಗಳಿಗೆ ಹೊಣೆ ಯಾರು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ನೋಟು ನಿಷೇಧದ ಪ್ರಮುಖ ಉದ್ದೇಶಗಳಲ್ಲಿ ಭಯೋತ್ಪಾದನೆ ನಿಯಂತ್ರಣ ಒಂದು ಎಂದು ಸರ್ಕಾರ ಹೇಳಿತ್ತು. ಆದರೆ ಯು.ಪಿ.ಎ ಅವಧಿಗೆ ಹೋಲಿಕೆ ಮಾಡಿದರೆ ಎನ್‌ಡಿಎ ಅವಧಿಯಲ್ಲಿ ಭಯೋತ್ಪಾದಕ ದಾಳಿ ಪ್ರಮಾಣ ಶೇ 176ರಷ್ಟು ಹೆಚ್ಚಿದೆ. ಮೋದಿಯವರ ಅವಧಿಯಲ್ಲಿ ಈವರೆಗೆ 1706 ಭಯೋತ್ಪಾದಕ ದಾಳಿಗಳಾಗಿವೆ. ಹಾಗಾದರೆ ನೋಟು ನಿಷೇಧದಿಂದಾದ ಉಪಯೋಗ‘ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.