ಬೆಂಗಳೂರು: ‘ಅಹಿಂದ ಒಂದು ಮತ ಬ್ಯಾಂಕ್ ಅಲ್ಲ. ಇದು ಭಾರತದ ಆತ್ಮಸಾಕ್ಷಿಯ ಧ್ವನಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಭವನದಲ್ಲಿ ಮಂಗಳವಾರ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಇತರ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ‘ಭಾರತದ ಭವಿಷ್ಯವನ್ನು ಬಹಿಷ್ಕಾರದ ಮೇಲೆ ಕಟ್ಟಲಾಗದು. ಅವಕಾಶ, ಘನತೆ ಮತ್ತು ಅಧಿಕಾರದೊಂದಿಗೆ ಎಲ್ಲರೂ ಒಟ್ಟಿಗೆ ಉನ್ನತ ಸ್ಥಾನ ಗಳಿಸಬೇಕು’ ಎಂದು ಆಶಿಸಿದರು.
‘ರಾಹುಲ್ ಗಾಂಧಿ ಅವರು ಹೇಳಿದಂತೆ, ‘ಜಿತ್ನಿ ಆಬಾದಿ, ಉತ್ನಿ ಹಖ್’ (ಎಷ್ಟು ಜನಸಂಖ್ಯೆಯೊ ಅಷ್ಟು ಹಕ್ಕು) ಸಿಗಬೇಕು. ಇದು ಪ್ರಜಾಪ್ರಭುತ್ವದ ಹೃದಯ. ಈ ಸಲಹಾ ಸಮಿತಿಯು ಕಾಂಗ್ರೆಸ್ ಪಕ್ಷವನ್ನು ಮಾತ್ರವಲ್ಲ, ಭಾರತ ಗಣರಾಜ್ಯವನ್ನು ಹೊಸ ನ್ಯಾಯದ ಕಡೆಗೆ ಕೊಂಡೊಯ್ಯಲಿ. ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಮತ್ತು ಸರ್ವೋದಯ ತತ್ವದಲ್ಲಿ ಭಾರತವನ್ನು ಕಟ್ಟೋಣ’ ಎಂದರು.
‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜಾತಿ ಜನಗಣತಿಯನ್ನು ರಾಜಕೀಯ ಚರ್ಚೆಯಿಂದ ಸಂವಿಧಾನದ ಅಗತ್ಯವನ್ನಾಗಿ ಮಾಡಬೇಕು. ನೀತಿಗಳನ್ನು ಹಿಂದುಳಿದ ವರ್ಗಗಳ ಧ್ವನಿ ರೂಪಿಸುವಂತೆ ಆಗಬೇಕು. ಬಿಜೆಪಿ ಜಾತಿಗಳ ನಡುವೆ ಒಡಕು ಉಂಟು ಮಾಡಿದರೆ, ನಾವು ಸಾಮಾಜಿಕ ಒಗ್ಗಟ್ಟು ಮತ್ತು ಸಾಂವಿಧಾನಿಕ ನ್ಯಾಯದಿಂದ ಗೆಲ್ಲಬೇಕಿದೆ’ ಎಂದರು.
‘ರಾಷ್ಟ್ರವ್ಯಾಪಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜಾತಿ ಜನಗಣತಿಯನ್ನು ಪೂರ್ಣಗೊಳಿಸಲು ನಾವು ನಿರಂತರವಾಗಿ ಪ್ರಯತ್ನಿಸಬೇಕು. ಜಾತಿ ಜನಗಣತಿಯ ಆಧಾರದಲ್ಲಿ ಶೇ 75ರಷ್ಟು ಮೀಸಲಾತಿ ಅಥವಾ ಪ್ರಮಾಣಕ್ಕೆ ಅನುಗುಣವಾದ ಪ್ರಾತಿನಿಧ್ಯಕ್ಕಾಗಿ ಹೋರಾಟ ಮಾಡಬೇಕು. ಖಾಸಗಿ ವಲಯದ ಉದ್ಯೋಗಗಳು, ಸರ್ಕಾರಿ ಗುತ್ತಿಗೆಗಳು ಮತ್ತು ಆರ್ಥಿಕ ನೆರವಿನ ಮೂಲಕ ಆರ್ಥಿಕ ಅವಕಾಶಗಳನ್ನು ವಿಸ್ತರಿಸಬೇಕು. ತಾರತಮ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಏಕೀಕರಣ ಸಾಧಿಸಬೇಕು’ ಎಂದೂ ಹೇಳಿದರು.
ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ‘ಇತರ ಹಿಂದುಳಿದ ವರ್ಗಗಳ ನಾಯಕರ ಮೊದಲ ಸಭೆ ಅರ್ಥಪೂರ್ಣವಾಗಿ ನಡೆಯಿತು. ನನ್ನ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಸುವಂತೆ ಸಲಹಾ ಸಮಿತಿ ಅಧ್ಯಕ್ಷರು ಸೂಚಿಸಿದ್ದರಿಂದ ನನ್ನ ಅಧ್ಯಕ್ಷತೆಯಲ್ಲೇ ಸಭೆ ನಡೆದಿದೆ. ಬುಧವಾರವೂ ಸಭೆ ಮುಂದುವರಿಯಲಿದೆ’ ಎಂದರು.
ಸಮಿತಿ ಸಂಚಾಲಕ ಅನಿಲ್ ಜೈ ಹಿಂದ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಂ. ವೀರಪ್ಪ ಮೊಯಿಲಿ, ಅಶೋಕ್ ಗೆಹಲೋತ್, ಬಿ.ಕೆ. ಹರಿಪ್ರಸಾದ್, ವಿ. ಹನುಮಂತ ರಾವ್, ಮಾಜಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ, ಸಂಸದರಾದ ಅಡೂರು ಪ್ರಕಾಶ್, ಜ್ಯೋತಿ ಮಣಿ ಮತ್ತಿತರರು ಇದ್ದರು. ಸಭೆಯಲ್ಲಿ ಭಾಗವಹಿಸಿದವರಿಗೆ ಡಿ.ಕೆ. ಶಿವಕುಮಾರ್ ಅವರು ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಬಿಜೆಪಿ ಸಾಮಾಜಿಕ ನ್ಯಾಯದ ಪರ ಮೀಸಲಾತಿ ಪರ ಇಲ್ಲ. ಬಿಜೆಪಿ ನಿರಂತರವಾಗಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿರುವುಕ್ಕೆ ಇಡೀ ದೇಶ ಸಾಕ್ಷಿಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.