ADVERTISEMENT

ರಾಹುಲ್‌ ಗಾಂಧಿ ಜೊತೆ ಸಿದ್ದರಾಮಯ್ಯ ಚರ್ಚೆ; ಕಾರ್ಯಾಧ್ಯಕ್ಷರ ನೇಮಕಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 2:04 IST
Last Updated 16 ಜನವರಿ 2020, 2:04 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ನವದೆಹಲಿ: ರಾಜ್ಯದಲ್ಲೂ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಪ್ರಮುಖ ಸಮುದಾಯಗಳ ಒಳಗೊಳ್ಳುವಿಕೆಗೆ ಆದ್ಯತೆ ನೀಡುವುದರೊಂದಿಗೆ ಪ್ರಾದೇಶಿಕತೆಗೂ ಒತ್ತು ನೀಡುವ ಈ ಸೂತ್ರ ಅನುಸರಿಸುವುದರಿಂದ ಪಕ್ಷದ ಬಲವರ್ಧನೆ ಸಾಧ್ಯ.ಇತರ ರಾಜ್ಯಗಳಲ್ಲಿ ಈಗಾಗಲೇ ಈ ಸೂತ್ರ ಅನುಸರಿಸಲಾಗಿದೆ ಎಂಬ ಅಭಿಪ್ರಾಯವನ್ನು ರಾಹುಲ್‌ ಗಾಂಧಿ ಅವರೊಂದಿಗಿನ ಭೇಟಿಯ ವೇಳೆ ಬುಧವಾರ ಅವರು ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಒಬ್ಬರನ್ನು, ಕಾರ್ಯಾಧ್ಯಕ್ಷ ಹುದ್ದೆಗೆ ರಾಜ್ಯದ ನಾಲ್ಕೂ ಭಾಗಕ್ಕೆ ಪ್ರಮುಖ ಸಮುದಾಯದ ಒಬ್ಬೊಬ್ಬ ಹಿರಿಯರನ್ನು ನೇಮಿಸಬೇಕು ಎಂಬ ಸಲಹೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ADVERTISEMENT

ಸಿದ್ದರಾಮಯ್ಯ ಮುಂದುವರಿಯಲಿ

‘ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು’ ಎಂಬ ಬೇಡಿಕೆಯನ್ನು ಕೆಲಬೆಂಬಲಿಗರು ಹೈಕಮಾಂಡ್‌ ಮುಂದೆ ಇರಿಸಿದ್ದಾರೆ.

ಶಾಸಕರಾದ ಜಮೀರ್‌ ಅಹಮದ್‌, ರಾಘವೇಂದ್ರ ಇಟ್ನಾಳ, ಭೀಮಾ ನಾಯ್ಕ, ಭೈರತಿ ಸುರೇಶ್‌, ತರೀಕೆರೆಯ ಮಾಜಿ ಶಾಸಕ ಶ್ರೀನಿವಾಸ್‌ಮತ್ತಿತರರು ಸಿದ್ದರಾಮಯ್ಯ ಜೊತೆ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭ ರಾಜೀನಾಮೆ ಸ್ವೀಕರಿಸದಂತೆ ಕೋರಿದ್ದಾರೆ.

ಪಕ್ಷದ ಸ್ಥಿತಿಗತಿ ಚರ್ಚೆ

‘ರಾಜ್ಯದಲ್ಲಿ ಕಾಂಗ್ರೆಸ್‌ ಎದುರಿಸುತ್ತಿರುವ ಸ್ಥಿತಿಗತಿ ಕುರಿತು ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ನೇಮಕ ಮಾಡುವಂತೆ ಕೋರಿದ್ದೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯ ಕುರಿತು ಚರ್ಚೆ ನಡೆಸಿಲ್ಲ. ಸ್ವೀಕರಿಸುವ ಮತ್ತು ತಿರಸ್ಕರಿಸುವ ನಿರ್ಧಾರ ವರಿಷ್ಠರಿಗೇ ಬಿಟ್ಟಿದ್ದು’ ಎಂದು ಹೇಳಿದರು.

‘ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ’

ಮನುಷ್ಯನಿಗೆ ಇತಿಮಿತಿಗಳು ಇರುತ್ತವೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅದಕ್ಕೆ ಹೊರತಲ್ಲ. ಅವರೊಬ್ಬರೇ 16 ಖಾತೆಗಳನ್ನು ನಿಭಾಯಿಸುವುದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಸಚಿವ ಸ್ಥಾನ ಕೋರುತ್ತ ರಾಜಕಾರಣದಲ್ಲಿ ಮಠಾಧೀಶರು ಹಸ್ತಕ್ಷೇಪ ಮಾಡುತ್ತಿರುವುದರ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.