ADVERTISEMENT

ಅಭಿವೃದ್ಧಿಗೆ ಕುಸುಮಾವತಿ ಬೆಂಬಲಿಸಲು ಮನವಿ

ಕುಂದಗೋಳ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಭಾಗಿ

​ಪ್ರಜಾವಾಣಿ ವಾರ್ತೆ
Published 19 ಮೇ 2019, 10:42 IST
Last Updated 19 ಮೇ 2019, 10:42 IST
ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರ ಕುಂದಗೋಳ ಪಟ್ಟದಲ್ಲಿ ಪ್ರಚಾರ ನಡೆಸಿ ಹೊರಟ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಕೈಕುಲುಕಲು ಮುಗಿಬಿದ್ದ ಜನ– ಪ್ರಜಾವಾಣಿ ಚಿತ್ರ
ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರ ಕುಂದಗೋಳ ಪಟ್ಟದಲ್ಲಿ ಪ್ರಚಾರ ನಡೆಸಿ ಹೊರಟ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಕೈಕುಲುಕಲು ಮುಗಿಬಿದ್ದ ಜನ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಕುಂದಗೋಳ ಪಟ್ಟಣದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕೊನೆಯ ಬಹಿರಂಗ ಸಭೆಯನ್ನು ಆಯೋಜಿಸಿತ್ತು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಕುಂದಗೋಳ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕುಸುಮಾವತಿ ಅವರು ಒಂಟಿ ಎಂದು ಯಾರೂ ಭಾವಿಸಬೇಕಿಲ್ಲ. ಅವರು ಗೆದ್ದ ನಂತರ ಇಡೀ ಸರ್ಕಾರವೇ ಅವರ ಬೆಂಬಲಕ್ಕೆ ನಿಲ್ಲಲಿದೆ, ಸಹಾಯ ಮಾಡಲಿದೆ ಎಂದು ಭರವಸೆ ನೀಡಿದರು.

‘ಜನರು ಅಧಿಕಾರ ಕೊಟ್ಟಾಗ ರಾಜ್ಯವನ್ನು ಲೂಟಿ ಹೊಡೆದು ಜೈಲಿಗೆ ಹೋದ ಯಡಿಯೂರಪ್ಪ, ಈಗ ಮತ್ತೆ ಅಧಿಕಾರ ನೀಡುವಂತೆ ಕೇಳುತ್ತಿದ್ದಾರೆ. ಜನರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬಾರದು. ಚಿಕ್ಕನಗೌಡ್ರ ಮೋದಿ ಅವರನ್ನು ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಜನರ ಪರ ಒಂದೇ ಒಂದು ಕೆಲಸ ಮಾಡದ ಮೋದಿ ಅವರು ₹ 400 ಇದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹ 900ಕ್ಕೆ ಏರಿಸಿದ್ದಾರೆ. ಅವರಿಗೆ ಮತ ನೀಡುತ್ತೀರ’ ಎಂದು ಸಿದ್ದರಾಮಯ್ಯ ಜನರನ್ನು ಪ್ರಶ್ನಿಸಿದರು.

ADVERTISEMENT

‘ಶಿವಳ್ಳಿ ಅವರಿಗೆ ಬಡವರ ಬಗ್ಗೆ ಅಪಾರ ಕಾಳಜಿ ಇತ್ತು. ಬಡವರು ಅವಕಾಶ ವಂಚಿತರ ಪರವಾಗಿ ಕೆಲಸ ಮಾಡುವ ಮನಸ್ಸು ಇರುವವರೇ ನಿಜವಾದ ಜನ ನಾಯಕರು. ಶಿವಳ್ಳಿ ಜನನಾಯಕ ಎನ್ನುವುದಕ್ಕಿಂತ ಅವರ ಜನ ಸೇವಕ ಆಗಿದ್ದರು. ಅವರ ಬದುಕಿದ್ದರೆ ಇನ್ನೂ ನಾಲ್ಕು ವರ್ಷ ಶಾಸಕರಾಗಿರುತ್ತಿದ್ದರು. ಅವರ ಅಕಾಲಿಕ ಮರಣದಿಂದಾಗಿ ಚುನಾವಣೆ ಬಂದಿದೆ. ಉಳಿದ ಅವಧಿಗೆ ಅವರ ಪತ್ನಿ ಕುಸುಮಾವತಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಭಾರತೀಯ ಖಾತೆಗೆ ₹ 15 ಲಕ್ಷ ಹಾಕುತ್ತೇನೆ ಎಂದರು. ಆದರೆ ಒಂದು ಪೈಸೆಯನ್ನೂ ಹಾಕಲಿಲ್ಲ. ಅದಕ್ಕೆ ಬದಲಾಗಿ ಬಡವರ ಖಾತೆಯಿಂದ ₹50 ಅನ್ನು ಸರ್ವೀಸ್ ಚಾರ್ಜ್‌ ಎಂದು ಕಡಿತ ಮಾಡಿದ್ದಾರೆ. ಆ ಮೊತ್ತವೇ ₹ 4 ಸಾವಿರವಾಗಿದೆ. ಚಿಮಣಿ ಎಣ್ಣೆ ನೀಡುವುದನ್ನು ಸಹ ಅವರು ನಿಲ್ಲಿಸಿದ್ದಾರೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿ ಜನ ನೀವೇ ಚಿಮಣಿ ಎಣ್ಣೆ ಕೊಡ್ರಿ ಎಂದು ಕೂಗಿದರು. ‘ಚಿಮಣಿ ಎಣ್ಣೆಯನ್ನು ಕೇಂದ್ರ ಸರ್ಕಾರವೇ ನೀಡಬೇಕಾಗುತ್ತದೆ. 23ರ ನಂತರ ಬಿಜೆಪಿ ಸರ್ಕಾರ ಹೋಗಲಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದು ಮತ್ತೆ ಚಿಮಣಿ ಎಣ್ಣೆಯನ್ನು ನೀಡುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.