ADVERTISEMENT

ಲೋಕಾಯುಕ್ತ ಸಂಸ್ಥೆ ರದ್ದು ಮಾಡಿದ್ದ ಸಿದ್ದರಾಮಯ್ಯ: ಬಿ.ಸಿ.ಪಾಟೀಲ ತಿರುಗೇಟು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 14:15 IST
Last Updated 14 ಮಾರ್ಚ್ 2023, 14:15 IST
   

ಹಾವೇರಿ: ‘ಜನತಾದಳ ಬಿಟ್ಟು ಕಾಂಗ್ರೆಸ್‌ಗೆ ಹೋದ ಸಿದ್ದರಾಮಯ್ಯನವರು ಎಷ್ಟು ಹಣ ತೆಗೆದುಕೊಂಡಿದ್ದರು. ಬೆಂಗಳೂರಿನ ಅರ್ಕಾವತಿ ಲೇಔಟ್‌‌‌ನಲ್ಲಿ‌‌ ಡಿನೋಟಿಫಿಕೇಶನ್ ಮಾಡಿ, ಆಯೋಗ ವರದಿ ಕೊಡುವಾಗ ಲೋಕಾಯುಕ್ತ ಸಂಸ್ಥೆಯ ಹಲ್ಲು ಕಿತ್ತು, ಎಸಿಬಿ ರಚನೆ ಮಾಡಿದರು. ಇವರೆಲ್ಲ ಸತ್ಯಹರಿಶ್ಚಂದ್ರನ ಮಕ್ಕಳಾ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಸಿದ್ದರಾಮಯ್ಯನವರಿಗೆ ತಿರುಗೇಟು ನಿಡಿದರು.

ಹಿರೇಕೆರೂರಿನಲ್ಲಿ ಮಂಗಳವಾರ ನಡೆದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಮಾವೇಶದಲ್ಲಿ ಅವರು ಮಾತನಾಡಿ, ಲೋಕಾಯುಕ್ತ ಸಂಸ್ಥೆಯನ್ನು ರದ್ದು ಮಾಡಿ, ಎಸಿಬಿ ಆರಂಭಿಸಿದ್ದೇ ಸಿದ್ದರಾಮಯ್ಯನವರ ಸಾಧನೆ. ಸಿದ್ದರಾಮಯ್ಯನವರು ₹8 ಸಾವಿರ ಕೋಟಿ ಹಗರಣ ಮಾಡಿದ್ದಾರೆ. ನೀತಿ ಪಾಠ ಹೇಳುವವರಿಗೆ ಆಗ ನ್ಯಾಯ, ನೀತಿ, ಧರ್ಮ, ಸಿದ್ಧಾಂತ ಎಲ್ಲಿ ಹೋಗಿದ್ದವು ಎಂದು ವಾಗ್ದಾಳಿ ನಡೆಸಿದರು.

ರೈತರ ಮಕ್ಕಳಿಗೆ ವಿದ್ಯಾನಿಧಿ, ಡಿಸೇಲ್‌ಗೆ ರಿಯಾಯಿತಿಯನ್ನು ಸಿದ್ದರಾಮಯ್ಯ ಸರ್ಕಾರ ಕೊಟ್ಟಿತ್ತಾ?, ಯು.ಬಿ. ಬಣಕಾರ ಅವರಿಗೆ ಯಾವುದೇ ತತ್ವ ಸಿದ್ಧಾಂತ ಇಲ್ಲ. ಮೊದಲು ಬಿಜೆಪಿ, ನಂತರ ಕೆಜೆಪಿ, ಈಗ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರನ್ನು ‘ನಿದ್ದೆರಾಮಯ್ಯ’ ಎಂದು ಟೀಕಿಸಿ, ಈಗ ಅವರ ಬಳಿ ಹೋಗಿ ಕುಳಿತುಕೊಂಡಿದ್ದಾರೆ ಎಂದು ಕುಟುಕಿದರು.

ADVERTISEMENT

ನಾನು ಹಿರೇಕೆರೂರು ತಾಲ್ಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಬಗ್ಗೆ ಪುಸ್ತಕ ಕೊಡುತ್ತೇನೆ. ನೀವು ಕೊಡಿ ನೋಡೋಣ. ಉಗ್ರಾಣ ನಿಗಮದ ಅಧ್ಯಕ್ಷರಾದ ಯು.ಬಿ.ಬಣಕಾರ ಹೆಗ್ಗಣವಾಗಿ ಮೇಯ್ದರು. ಕ್ಷೇತ್ರ ಬಿಟ್ಟುಕೊಟ್ಟು ತ್ಯಾಗ ಮಾಡಿದ್ದೇನೆ ಎನ್ನುವ ಬಣಕಾರ ಒಂದೇ ಒಂದು ಕೆರೆ ತುಂಬಿಸಿದ್ದಾರಾ, ಕ್ಷೇತ್ರಕ್ಕೆ ನಿಮ್ಮ ಸಾಧನೆಯೇನು ತಿಳಿಸಿ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.