ADVERTISEMENT

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಅಗತ್ಯಬಿದ್ದರೆ ನ್ಯಾಯಾಲಯಕ್ಕೆ; ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 12:39 IST
Last Updated 3 ಅಕ್ಟೋಬರ್ 2025, 12:39 IST
<div class="paragraphs"><p>ಸಿದ್ದರಾಮಯ್ಯ&nbsp;, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ , ಮುಖ್ಯಮಂತ್ರಿ

   

ಮೈಸೂರು: ಮೈಸೂರು: ‘ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರಿದಂದ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ. ಹೀಗಾಗಿ, ಕಳೆದ ಬಾರಿಯಂತೆ ಈ ಸಲವೂ ಅಗತ್ಯಬಿದ್ದರೆ ನ್ಯಾಯಾಲಯದ ನೆರವಿನಲ್ಲಿ ನಮ್ಮ ಅನುದಾನ ಪಡೆದುಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯಕ್ಕೆ ಸಾಕಷ್ಟು ಅನುದಾನ ಖೋತಾ ಆಗಿದೆ. ಉತ್ತರಪ್ರದೇಶಕ್ಕೆ ಶೇ.18ರಷ್ಟು ನೀಡುತ್ತಿದ್ದು, ರಾಜ್ಯಕ್ಕೆ ಕೇವಲ ಶೇ. 3.5ರಷ್ಟು ಕೊಟ್ಟಿರುವುದು ಅನ್ಯಾಯ. ಕರ್ನಾಟಕ ₹ 4.5 ಲಕ್ಷ ಕೋಟಿಯನ್ನು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡಿದರೆ, ನಮಗೆ ರೂಪಾಯಿಗೆ 14 ಪೈಸೆ ಮಾತ್ರ ಸಿಗುತ್ತಿದೆ’ ಎಂದು ದೂರಿದರು.

ADVERTISEMENT

‘15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಅನುದಾನವನ್ನು ಕೇಂದ್ರ ವಿತ್ತ ಸಚಿವರು ರದ್ದುಪಡಿಸಿದರು. ಆಯೋಗದ ಶಿಫಾರಸಿನಂತೆ ₹ 5,490 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ ₹3ಸಾವಿರ ಕೋಟಿ, ರಸ್ತೆ ನಿರ್ಮಾಣಕ್ಕೆ ₹ 3ಸಾವಿರ ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ ₹ 5ಸಾವಿರ ಕೋಟಿಯನ್ನು ನಮಗೆ ಕೊಟ್ಟೇ ಇಲ್ಲ. ನಮಗೆ ಬರಬೇಕಾದ ₹17ಸಾವಿರ ಕೋಟಿ ಖೋತಾ ಆಗಿದೆ’ ಎಂದು ತಿಳಿಸಿದರು.

ಬೆನ್ನು ತಟ್ಟಿಕೊಳ್ಳುತ್ತಿರುವ ಕೇಂದ್ರ:

ಜಿಎಸ್‌ಟಿ ಉತ್ಸವ ಆಚರಿಸುವಂತೆ ಕೇಂದ್ರ ಸರ್ಕಾರ ತಿಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘2017ರಲ್ಲಿ ಕೇಂದ್ರ ಸರ್ಕಾರವೇ ಜಿಎಸ್‌ಟಿ ಜಾರಿಗೆ ತಂದು ದರ ನಿಗದಿಪಡಿಸಿತ್ತು. ಕಳೆದ 8 ವರ್ಷಗಳಿಂದ ಹೆಚ್ಚಿನ ತೆರಿಗೆ ಪಡೆದಿರುವ ಕೇಂದ್ರ, ಆ ಹಣವನ್ನು ಮರಳಿಸುವುದೇ? ತಾನೇ ಹೆಚ್ಚಿಸಿದ ಜಿಎಸ್‌ಟಿ ದರವನ್ನು ಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ಳುತ್ತಿದೆ’ ಎಂದು ಟೀಕಿಸಿದರು.

‘ಕೇಂದ್ರ ನೀಡುತ್ತಿರುವ ಕಡಿಮೆ ಅನುದಾನದ ನಡುವೆ ಗ್ಯಾರಂಟಿ ಯೋಜನೆಗಳ ವೆಚ್ಚ ಭರಿಸುವುದು ಸರ್ಕಾರಕ್ಕೆ ಸವಾಲಾಗಿದ್ದರೂ, ಅದನ್ನು ದಿಟ್ಟತನದಿಂದ ಎದುರಿಸಲಾಗುವುದು. ಜಿಎಸ್‌ಟಿ ಸರಳೀಕರಣದಿಂದ ರಾಜ್ಯ ಸರ್ಕಾರಗಳು ಹೆಚ್ಚು ನಷ್ಟ ಎದುರಿಸಲಿವೆ. ಆದರೆ, ಕರ್ನಾಟಕದ ಬಿಜೆಪಿ ಸಂಸದರಿಗೆ ನರೇಂದ್ರ ಮೋದಿ ಅವರನ್ನು ಹೊಗಳುವುದೇ ಕೆಲಸವಾಗಿದ್ದು, ನಾಡಿನ ಹಿತಚಿಂತನೆ ಮಾಡುತ್ತಿಲ್ಲ’ ಎಂದು ದೂರಿದರು.

ಅಶೋಕ್‌ಗೆ ಏನ್‌ ಗೊತ್ತು?:

‘ರೈತರ ಸಮಸ್ಯೆ ಬಗೆಹರಿಸದಿದ್ದರೆ ಸರ್ಕಾರ ಇದ್ದರೂ ಸತ್ತಂತೆಯೇ’ ಎಂಬ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಅವರು ಆರ್‌ಎಸ್‌ಎಸ್‌ ಆರ್ ನಿರ್ದೇಶನದಂತೆ ಮಾತನಾಡುತ್ತಾರೆ. ರಾಜಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಅವನಿಗೆ ನಾಡಿನ, ರೈತನ ಸಮಸ್ಯೆ ಏನು ಗೊತ್ತು?’ ಎಂದು ಕೇಳಿದರು.

ಸಮೀಕ್ಷೆಯ ಪ್ರಗತಿ ಗಮನಿಸಿ ಮುಂದಿನ ನಿರ್ಧಾರ: ಸಿಎಂ

‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಅ.7ರೊಳಗೆ ಪೂರ್ಣಗೊಳಿಸುವ ಭರವಸೆ ಇದೆ. ಈಗಾಗಲೇ 80 ಲಕ್ಷ ಮನೆಗಳಿಂದ 3 ಕೋಟಿ ಜನರ ಸಮೀಕ್ಷೆ ಪೂರ್ಣಗೊಂಡಿದೆ. 1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅಗತ್ಯಬಿದ್ದರೆ ದಿನಾಂಕ ವಿಸ್ತರಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

‘ಮತಾಂತರಕ್ಕಾಗಿ ಹಾಗೂ ಜಾತಿ ಒಡೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸಮೀಕ್ಷೆ ನಡೆಸುತ್ತಿದೆ’ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕೇಂದ್ರ ನಡೆಸಲಿರುವ ಜಾತಿ ಸಮೀಕ್ಷೆಯ ಉದ್ದೇಶವನ್ನು ತಿಳಿಸಲಿ. ಅವರಿಗೂ ಜಾತಿ, ಧರ್ಮ ಒಡೆಯುವ ಉದ್ದೇಶವಿದೆಯೇ? ಕರ್ನಾಟಕದಲ್ಲಿ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಜನರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುವುದು ನಮ್ಮ ಉದ್ದೇಶವಾಗಿದೆ’ ಎಂದರು.

‘ನಮಗೆ ಜಾತಿ ಒಡೆಯುವ ಉದ್ದೇಶವಿಲ್ಲ. ಜನರು ಸ್ವಯಂಪ್ರೇರಿತರಾಗಿ ಜಾತಿ ನಮೂದಿಸಿದರೆ ಅದಕ್ಕೆ ಸರ್ಕಾರ ಜವಾಬ್ದಾರಿಯಲ್ಲ. ಜನರ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ದೂರಿದರು.

ಡಿಸೆಂಬರ್‌ನಲ್ಲಿ ಹೊಸ ಮನೆ ಪ್ರವೇಶ: ಸಿಎಂ

‘ಮೈಸೂರಿನಲ್ಲಿ ನಿರ್ಮಿಸಿರುವ ಹೊಸ ಮನೆಯ ಪ್ರವೇಶ ಡಿಸೆಂಬರ್‌ಗೆ ಮಾಡುತ್ತೇನೆ. ಯಾರನ್ನೂ ಆಹ್ವಾನಿಸುವುದಿಲ್ಲ. ಕುಟುಂಬದವರು ಮಾತ್ರ ಸೇರಿ ಕಾರ್ಯಕ್ರಮ ಮಾಡುತ್ತೇವೆ. ಮನೆಯ ಕೆಲಸ ಬಹುತೇಕ ಮುಕ್ತಾಯವಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಮೈಸೂರಿನಲ್ಲಿ ನಾನಿರುವ ಮನೆ ನನ್ನದಲ್ಲ, ಮರಿಸ್ವಾಮಿ ಅವರದ್ದು. ಆತನೇ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತ. ಗೃಹ ಪ್ರವೇಶ ಆದ ಮೇಲೆ ಹೊಸ ಮನೆಗೆ ಹೋಗುತ್ತೇನೆ. ಈ ಮನೆಯನ್ನು ಮರಿಸ್ವಾಮಿ ಖಾಲಿ ಇಟ್ಟರೆ ಜನರ ಭೇಟಿಗೆ ಇದನ್ನೇ ಬಳಸಿಕೊಳ್ಳುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.