ADVERTISEMENT

ಬಾದಾಮಿ ಬಿಟ್ಟು ಬೆಂಗಳೂರಿಗೆ ಸಿದ್ದರಾಮಯ್ಯ? ಮಗ ಯತೀಂದ್ರ ಸುಳಿವು

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 19:47 IST
Last Updated 27 ಜೂನ್ 2022, 19:47 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ತಂದೆಯವರಿಗೆ (ಸಿದ್ದರಾಮಯ್ಯ) ಇದು ಕೊನೆಯ ಚುನಾವಣೆ. ವಯಸ್ಸಿನ ಸಮಸ್ಯೆ ಕಾರಣಕ್ಕೆ ಬಾದಾಮಿ ಕ್ಷೇತ್ರಕ್ಕೆ ಹೋಗಿ ಬರುವುದು ಅವರಿಗೆ ಕಷ್ಟವಾಗಲಿದೆ. ಹೀಗಾಗಿ, ಬೆಂಗಳೂರು ಸುತ್ತಮುತ್ತಲಿನ ಕ್ಷೇತ್ರವನ್ನು ಆರಿಸಿಕೊಳ್ಳಲು ಅವರು ಆಸಕ್ತಿ ಹೊಂದಿದ್ದಾರೆ’ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಅಂತಿಮವಾಗಿಲ್ಲ. ರಾಜ್ಯದ ಎಲ್ಲ ಕ್ಷೇತ್ರಗಳ ಬಗ್ಗೆ ಅವರಿಗೆ ಸಂಪೂರ್ಣ ಅರಿವು ಇದೆ. ಯಾವ ಕ್ಷೇತ್ರ ಉತ್ತಮ ಎನ್ನುವುದೂ ಗೊತ್ತಿದೆ. ಅವರು ಬಯಸಿದರೆ ವರುಣಾ ಕ್ಷೇತ್ರ ಬಿಟ್ಟು ಕೊಡಲು ಸಿದ್ಧನಿದ್ದೇನೆ. ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ’ ಎಂದರು.

‘ನಾನು ಮನೆಯಲ್ಲಿ ತಂದೆಯವರ ಆಡಳಿತ ವೈಖರಿ ನೋಡಿಕೊಂಡು ಬೆಳೆದವನು. ಅವರ ಪ್ರಾಮಾಣಿಕತೆ, ಬದ್ಧತೆ ನನಗೆ ಸ್ಫೂರ್ತಿಯಾಗಿದೆ. ತತ್ವ, ಸಿದ್ದಾಂತದ ವಿಚಾರದಲ್ಲಿ ಅವರು ಎಂದೂ ರಾಜಿಯಾದವರಲ್ಲ. ವರುಣಾ ಕ್ಷೇತ್ರದ ಶಾಸಕನಾಗಿರುವ ಕಾರಣಕ್ಕೆ ವೃತ್ತಿಯಲ್ಲಿ ವೈದ್ಯನಾದರೂ ಸದ್ಯ ರಾಜಕೀಯಕ್ಕೆ ಆದ್ಯತೆ ನೀಡುತ್ತೇನೆ. ಈಗ ರಾಜಕೀಯ ಮಾಡುವುದು ಅಷ್ಟು ಸುಲಭವಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.