ADVERTISEMENT

ಸೇತುವೆ ದುರಂತ ದೇವರು ಯಾರಿಗೆ ನೀಡಿದ ಸಂದೇಶ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2022, 10:21 IST
Last Updated 31 ಅಕ್ಟೋಬರ್ 2022, 10:21 IST
   

ಭಾನುವಾರ ನಡೆದ ಗುಜರಾತ್‌ನ ಮೊರ್ಬಿ ತೂಗು ಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಮೋದಿ ಅವರ ಹಳೆ ಭಾಷಣದ ವಿಡಿಯೊವೊಂದನ್ನು ಕಾಂಗ್ರೆಸ್‌ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ಚುನಾವಣಾ ಕಾಲದಲ್ಲಿ ಕೊಲ್ಕತ್ತಾದ ಮೇಲುಸೇತುವೆ ಕುಸಿದದ್ದು ಬಂಗಾಳಕ್ಕೆ ದೇವರು ಕಳಿಸಿದ್ದ ಸಂದೇಶ ಎನ್ನುವುದಾದರೆ, ಈಗ ಚುನಾವಣಾ ಕಾಲದಲ್ಲಿ ಗುಜರಾತ್ ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ’ ಎಂದು ಸಿದ್ದರಾಮಯ್ಯ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ವೇಳೆ ಮೋದಿ ಮಾಡಿದ್ದ ಭಾಷಣದ ತುಣುಕನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

2016 ಮಾರ್ಚ್‌ನಲ್ಲಿ ವಿವೇಕಾನಂದ ರಸ್ತೆ ಮೇಲುಸೇತುವೆ ಕುಸಿದಿದ್ದನ್ನು ಚುನಾವಣಾ ಪ್ರಚಾರದ ಅಸ್ತ್ರವಾಗಿ ಮೋದಿ ಬಳಸಿಕೊಂಡಿದ್ದರು. ಬಹಿರಂಗ ಸಭೆಯಲ್ಲಿ ಮಾತನಾಡುತ್ತ ಮೇಲುಸೇತುವೆ ಕುಸಿದಿರುವುದು ಆಡಳಿತ ಬದಲಾವಣೆಗಾಗಿ ದೇವರು ಜನತೆಗೆ ನೀಡಿರುವ ಸಂದೇಶ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದರು.

ADVERTISEMENT

ದಿಗ್ವಿಜಯ್‌ ಸಿಂಗ್‌, ಶಿವಸೇನೆಯ ರಾಜ್ಯ ಸಭಾ ಸದಸ್ಯೆ ಪ್ರಿಯಾಂಕಾ ಕೂಡ ಗುಜರಾತ್‌ ದುರ್ಘಟನೆಯು ಮೋದಿಯ ‘ದೇವರ ಸಂದೇಶ ಮತ್ತು ವಂಚನೆ ಫಲ’ ಎಂಬ ಹಳೆಯು ಭಾಷಣವನ್ನು ನೆನಪಿಸುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಭಾನುವಾರ ಸಂಜೆ ಮುರಿದು ಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.