ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು/ ಮೈಸೂರು: ‘ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಹೆಚ್ಚಿನ ಕೆಲಸವನ್ನು ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿದ್ದಾರೆ’ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.
ಕೂಡಲೇ ಕ್ಷಮೆ ಯಾಚಿಸಿಲಿ: ಆರ್. ಅಶೋಕ
‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಳೇ ಮೈಸೂರು ಭಾಗದಲ್ಲಿ ಮಾಡಿದ ಒಳ್ಳೆಯ ಕೆಲಸಗಳಿಂದಾಗಿ ಜನರು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅವರನ್ನು ರಾಜಕಾರಣಿಗಳಿಗೆ ಹೋಲಿಸುವುದು ಸರಿಯಲ್ಲ. ಯತೀಂದ್ರ ಅವರು ಕೂಡಲೇ ಕ್ಷಮೆ ಕೇಳಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿನ್ನಾಭರಣ ಅಡವಿಟ್ಟು ನಿರ್ಮಿಸಿದ ಕೆಆರ್‌ಎಸ್ ಜಲಾಶಯ ಆ ಭಾಗದ ಜನರಿಗೆ ಜೀವಜಲ. ಕೈಗಾರಿಕೆ, ವಿಶ್ವವಿದ್ಯಾಲಯಗಳ ಸ್ಥಾಪನೆ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಮಾಡಿದ ಒಡೆಯರ್ ಅವರನ್ನು ಮೈಸೂರು ಪ್ರಾಧಿಕಾರದಿಂದ 14 ಸೈಟು ಪಡೆದವರಿಗೆ ಹೋಲಿಕೆ ಮಾಡಬಾರದು. ಯತೀಂದ್ರ ಸಿದ್ದರಾಮಯ್ಯ ಅವರು ಮಹಾರಾಜರ ಕುಟುಂಬಕ್ಕೆ ಅಪಮಾನ ಮಾಡಿದ್ದಾರೆ’ ಎಂದು ದೂರಿದರು.
ಹುಚ್ಚು ಹೇಳಿಕೆ ಸಲ್ಲದು: ಬಿ.ವೈ. ವಿಜಯೇಂದ್ರ
ನಾಲ್ವಡಿ ಕೃಷ್ಣರಾಜ ಒಡೆಯರ್ ಜತೆಗೆ ಸಿದ್ದರಾಮಯ್ಯ ಜತೆ ಹೋಲಿಕೆ ಸಲ್ಲದು. ಹುಚ್ಚು ಹೇಳಿಕೆ ನೀಡುವ ಮೂಲಕ ತಮ್ಮ ತಂದೆ ಸಿದ್ದರಾಮಯ್ಯ ಅವರನ್ನು ಅಟ್ಟಕ್ಕೇರಿಸುವ ಕೆಲಸವನ್ನು ಯತೀಂದ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ದೂರಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಒಡೆಯರ್ ಅವರ ಇತಿಹಾಸವನ್ನು ಓದಿರುವ ಜನರು ಸಿದ್ದರಾಮಯ್ಯ ಅವರ ವ್ಯಕ್ತಿತ್ವವನ್ನೂ ನೋಡಿದ್ದಾರೆ. ಇಂತಹ ಹೇಳಿಕೆ ಗಳಿಂದ ಅವರಿಗೂ ಪ್ರಯೋಜನ ಇಲ್ಲ, ರಾಜ್ಯಕ್ಕೂ ಪ್ರಯೋಜನ ಇಲ್ಲ ಎಂದರು.
ಶ್ವೇತಪತ್ರ ಹೊರಡಿಸಿ: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮೈಸೂರು: ‘ರಾಜ್ಯ ಸರ್ಕಾರಿಂದ ಆಗಿರುವ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ವೇತಪತ್ರ ಹೊರಡಿಸಲಿ, ನಂತರ ನಮ್ಮನ್ನು ಚರ್ಚೆಗೆ ಆಹ್ವಾನಿಸಲಿ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸವಾಲು ಹಾಕಿದರು.
‘ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ’ ಎಂಬ ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಯಾರು ಯಾರಿಗೂ ಹೋಲಿಸಿ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದರು.
ಚಾಮುಂಡಿಗಿಂತ ದೊಡ್ಡವರು ಎನ್ನುತ್ತಾರೆ: ಪ್ರತಾಪ ಸಿಂಹ
ಮೈಸೂರು: ‘ನಾನು ದೇವರಾಜ ಅರಸುಗಿಂತ ದೊಡ್ಡವ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಈಗ ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತಲೂ ದೊಡ್ಡವರಾಗಿದ್ದಾರೆ. ಮುಖ್ಯಮಂತ್ರಿಯಾಗಿ 10 ವರ್ಷ ಪೂರೈಸಿಬಿಟ್ಟರೆ, ನಾಡದೇವತೆ ಚಾಮುಂಡಿಗಿಂತಲೂ ದೊಡ್ಡವನು ಎಂದುಬಿಡುತ್ತಾರೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದರು.
ಯತೀಂದ್ರ ಹೇಳಿಕೆಗೆ ಪ‍್ರತಿಕ್ರಿಯಿಸಿದ ಅವರು,‘ನಿಮ್ಮಪ್ಪನ ಕೊಡುಗೆ ಏನು ಹೇಳಿ?’ ಎಂದರು.
‘ಇವರಿಗೆ ಕೆ.ಆರ್. ಆಸ್ಪತ್ರೆಗೆ ಸುಣ್ಣ ಬಳಿಸಲೂ ಆಗಿಲ್ಲ. ಮುಡಾ ನಿವೇಶನ ಹೊಡೆದದ್ದೇ ಕೊಡುಗೆಯೇ? ಉಡಾಫೆ ಮಾತನಾಡಿಕೊಂಡು ಓಡಾಡಿದ್ದೇ ಸಿ.ಎಂ ಸಾಧನೆ. ಯಾರ‍್ಯಾರು ಏನೇನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಚರ್ಚಿಸೋಣ. ಮುಖ್ಯಮಂತ್ರಿಯೇ ವೇದಿಕೆ ಸಿದ್ಧಮಾಡಲಿ’ ಎಂದರು.
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಮೈಸೂರಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಅರ್ಥದಲ್ಲಿ ಯತೀಂದ್ರ ಮಾತನಾಡಿದ್ದಾರೆಯೇ ಹೊರತು, ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಹೋಲಿಕೆ ಮಾಡಿಲ್ಲ
ಯತೀಂದ್ರ ಇನ್ನೂ ಬೆಳೆಯುವ ಹುಡುಗ. ಈಗಲೇ ಈ ಥರದ ದುರಹಂಕಾರದ ಮಾತು ಸರಿಯಲ್ಲ. ನಾಲ್ವಡಿ ಅವರದ್ದಿರಲಿ, ಸಿದ್ದರಾಮಯ್ಯ ಆಡಳಿತವು ದೇವರಾಜ ಅರಸು, ಎಸ್.ಎಂ. ಕೃಷ್ಣ ಆಡಳಿತಕ್ಕೂ ಸಮವಿಲ್ಲ,ಎ.ಎಚ್. ವಿಶ್ವನಾಥ್, ವಿಧಾನಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.