ಸಿದ್ದರಾಮಯ್ಯ
ಬೆಂಗಳೂರು: ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕಾಂಗ್ರೆಸ್‌ಗೆ ಅನಿವಾರ್ಯ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಾಖ್ಯಾನಿಸಿದರು.
ಮುಖ್ಯಮಂತ್ರಿಯ ಆಪ್ತ ವಲಯದಲ್ಲಿರುವ ಶಾಸಕ ಕೆ.ಎನ್. ರಾಜಣ್ಣ ಕೂಡಾ ಇತ್ತೀಚೆಗೆ, ‘ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ’ ಎಂದಿದ್ದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಲಾಡ್, ‘ಸಿದ್ದರಾಮಯ್ಯ ನಾಯಕತ್ವ ಬೇಕೇ ಬೇಕು. ನಿರ್ವಿವಾದವಾಗಿ ಇಡೀ ರಾಜ್ಯಕ್ಕೆ ಅವರ ನಾಯಕತ್ವ ಬೇಕು. ಅವರು ರಾಜ್ಯ ರಾಜಕಾರಣದಿಂದ ನಿವೃತ್ತಿಯಾಗದೆ, ಸಕ್ರಿಯರಾಗಿಯೇ ಇರಬೇಕು’ ಎಂದು ಅಭಿಪ್ರಾಯಪಟ್ಟರು.
‘ಮುಂದಿನ ಅವಧಿಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರೂ ನಾವು ಒಪ್ಪಲ್ಲ. ಅವರು ಜನಪ್ರಿಯ ನಾಯಕ. ಕಾಂಗ್ರೆಸ್ ಪಕ್ಷಕ್ಕೆ ಮುಖ ಇದ್ದಂತೆ. ಖಂಡಿತವಾಗಿಯೂ ಅವರ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆ. ರಾಜಕಾರಣದಿಂದ ಅವರು ಹೊರಗೆ ಉಳಿಯಬಾರದು ಎನ್ನುವುದು ನನ್ನ ವಾದ’ ಎಂದರು.
‘ನಾಯಕತ್ವ ಬದಲಾವಣೆ ಸನ್ನಿವೇಶ ರಾಜ್ಯದಲ್ಲಿ ಇಲ್ಲ. ಅದರ ಅನಿವಾರ್ಯವೂ ನಮಗೆ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡಬೇಕು. ಎರಡೂವರೆ ವರ್ಷಕ್ಕೆ ಮಾತ್ರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಂದು ಹೈಕಮಾಂಡ್ ಷರತ್ತು ಹಾಕಿಲ್ಲ. ನನ್ನ ಬಳಿಯಂತೂ ಯಾರೂ ಈ ರೀತಿ ಹೇಳಿಲ್ಲ’ ಎಂದೂ ಹೇಳಿದರು.
ಬಾಯಿ ಮುಚ್ಚಿಕೊಂಡಿರಬೇಕು: ‘ಅಧಿಕಾರ ಹಸ್ತಾಂತರ, ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅವರಿಬ್ಬರೂ ಹೇಳಿಕೆ ನೀಡಿದರೆ ಅದೇ ಅಂತಿಮ. ಆ ಬಗ್ಗೆ ಯಾವ ಸಚಿವರೂ, ಶಾಸಕರೂ ಮಾತನಾಡಬಾರದು. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಅಷ್ಟೆ’ ಎಂದರು.
ವರಿಷ್ಠ ನಿರ್ಧಾರಕ್ಕೆ ಬದ್ಧ: ‘ನಾಯಕತ್ವ ಬದಲಾವಣೆ ವಿಚಾರದಲ್ಲಿ ಯಾವಾಗ ಏನು ಆಗಬೇಕೊ ಅದು ಆಗಲಿದೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ’ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
‘ಈಗ ಯಾವ ಕುರ್ಚಿಯೂ ಖಾಲಿ ಇಲ್ಲ. ಸುಮ್ಮನೆ ಮಾತನಾಡುವುದು ಸರಿಯಲ್ಲ’ ಎಂದರು.
‘ಸಚಿವ ಸ್ಥಾನದ ಆಕಾಂಕ್ಷಿಯೇ’ ಎಂಬ ಪ್ರಶ್ನೆಗೆ, ‘ನಾನು ಯಾರ ಬಳಿಯೂ ಏನೂ ಕೇಳುವುದಿಲ್ಲ. ಅರ್ಹತೆ ಇದ್ದರೆ ಅದಾಗಿಯೇ ಬರುತ್ತದೆ. ಅವಕಾಶ ಬರುವರೆಗೆ ನಾನು ಕಾಯುತ್ತೇನೆ’ ಎಂದರು.
‘ಎಲ್ಲರೂ ಆಸೆ ಇಟ್ಟುಕೊಂಡಿದ್ದಾರೆ. ಯಾರೂ ಇಲ್ಲಿ ಸನ್ಯಾಸಿಗಳಲ್ಲ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.