ADVERTISEMENT

₹ 1 ಕೋಟಿ ಮೀರಿದ ಎಲ್ಲ ಟೆಂಡರ್‌ ಪರಾಮರ್ಶೆಗೆ ಮುಂದಾದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಚಿವಾಲಯಕ್ಕೆ ತಕ್ಷಣ ಮಾಹಿತಿ ಸಲ್ಲಿಸಲು ಸಿದ್ದರಾಮಯ್ಯ ಸೂಚನೆ

ರಾಜೇಶ್ ರೈ ಚಟ್ಲ
Published 29 ಮೇ 2023, 18:46 IST
Last Updated 29 ಮೇ 2023, 18:46 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ‘ಬಿಜೆಪಿ ಸರ್ಕಾರ ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ಇಲಾಖೆಗಳು ಮತ್ತು ನಿಗಮಗಳು ನೀಡಿದ ₹ 1 ಕೋಟಿಗೂ ಮೀರಿದ ಎಲ್ಲ ಟೆಂಡರ್‌ಗಳ ಮಾಹಿತಿಯನ್ನು ತಕ್ಷಣ ನನ್ನ ಸಚಿವಾಲಯಕ್ಕೆ ಸಲ್ಲಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಆ ಮೂಲಕ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಕೊನೆಯ ಅವಧಿಯಲ್ಲಿ ಒಪ್ಪಿಗೆ ನೀಡಿದ ₹ 1 ಕೋಟಿ ಮೀರಿದ ಎಲ್ಲ ಟೆಂಡರ್‌ಗಳನ್ನು ಪರಾಮರ್ಶೆಗೆ ಒಳಪಡಿಸಲು ಖುದ್ದು ಮುಖ್ಯಮಂತ್ರಿ ಮುಂದಾಗಿದ್ದಾರೆ.

ಮುಖ್ಯ ಕಾರ್ಯದರ್ಶಿಗೆ ಬರೆದ ಟಿಪ್ಪಣಿಯಲ್ಲಿ, ‘ಈ ಹಿಂದಿನ ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳು ಕಾಮಗಾರಿಗಳನ್ನು ಮಾಡಲು ಮತ್ತು ಸೇವೆಗಳನ್ನು ಪಡೆಯಲು ಆರು ತಿಂಗಳಿನಿಂದ ಟೆಂಡರ್‌ಗಳನ್ನು ಕರೆದು ಕಾಮಗಾರಿ ಮತ್ತು ಸೇವೆಗಳ ಆದೇಶಗಳನ್ನು ನೀಡಿದೆ. ಈ ರೀತಿ ನೀಡಲಾಗಿರುವ ಮತ್ತು ನೀಡಲಾಗುತ್ತಿರುವ ಅಂದಾಜು ಪಟ್ಟಿ ₹ 1 ಕೋಟಿಗೂ ಮೀರುವ ಎಲ್ಲ ಟೆಂಡರ್‌ಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಸರ್ಕಾರದ ಕಾರ್ಯದರ್ಶಿಗಳು ಮತ್ತೊಮ್ಮೆ ಪರಾಮರ್ಶಿಸಿ, ವಿವರಗಳನ್ನು ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

ಅಷ್ಟೇ ಅಲ್ಲ, ‘ಪ್ರತಿ ಕಾಮಗಾರಿಯ ವಿವರಗಳು, ಅಂದಾಜು ಮೊತ್ತ, ಆಡಳಿತಾತ್ಮಕ ಮಂಜೂರಾತಿ ನೀಡಿದ ದಿನ, ಟೆಂಡರ್‌ ನೀಡಿದ ದಿನ, ಪ್ರಸ್ತುತ ಕಾಮಗಾರಿಯ ಹಂತ ಈ  ಐದು ಅಂಶಗಳನ್ನು ನೀಡಿರುವ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು’ ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.

ಮುಖ್ಯಮಂತ್ರಿಯ ಸೂಚನೆಯ ಬೆನ್ನಲ್ಲೆ, ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಟಿಪ್ಪಣಿ ಕಳುಹಿಸಿರುವ ಮುಖ್ಯ ಕಾರ್ಯದರ್ಶಿ, ‘ಮುಖ್ಯಮಂತ್ರಿ ತಿಳಿಸಿದ ನಮೂನೆಯಲ್ಲಿಯೇ ವಿವರಗಳನ್ನು ತಕ್ಷಣ ಮುಖ್ಯಮಂತ್ರಿ ಸಚಿವಾಲಯಕ್ಕೆ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಜಲ ಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿರುವ ವಿಶ್ವೇಶ್ವರಯ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ, ಕೃಷ್ಣಾ ಭಾಗ್ಯ ಜಲ ನಿಗಮ, ಇಂಧನ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ₹ 1 ಕೋಟಿಗೂ ಮೀರಿದ ನೂರಾರು ಕಾಮಗಾರಿಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.     

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆ ಬೆನ್ನಲ್ಲೇ (ಮೇ 22), ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲಾಖೆಗಳು ಮತ್ತು ಇಲಾಖೆಗಳ ಅಡಿಯಲ್ಲಿರುವ ನಿಗಮ, ಮಂಡಳಿ, ಪ್ರಾಧಿಕಾರಗಳ ಮೂಲಕ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಂದಿನ ಹಂತದ ಹಣ ಬಿಡುಗಡೆ ಮತ್ತು ಪಾವತಿಗಳನ್ನು ತಕ್ಷಣದಿಂದ ತಡೆಹಿಡಿಯುವಂತೆ ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿ ಸೂಚಿಸಿದ್ದರು. ಅದರಂತೆ, ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್ ಸುತ್ತೋಲೆ ಹೊರಡಿಸಿದ್ದರು. ಅದೇ ದಿನ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರು ಮಾಡಲಾದ ಸುಮಾರು ₹ 20 ಸಾವಿರ ಕೋಟಿ ಮೌಲ್ಯದ ಕಾಮಗಾರಿಗಳು ಹಾಗೂ ಟೆಂಡರ್‌ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದರು.

ಕೆಕೆಆರ್‌ಡಿಬಿಯಲ್ಲಿ ನೂರಾರು ಕಾಮಗಾರಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) 2022–23ನೇ ಸಾಲಿನಲ್ಲಿ ₹ 3,000 ಕೋಟಿ ಅನುದಾನ ನೀಡಲಾಗಿದೆ. ಹಿಂದಿನ ವರ್ಷದಲ್ಲಿ ಉಳಿಕೆಯಾದ ಮೊತ್ತ ₹ 785 ಕೋಟಿ ಸೇರಿ, ಒಟ್ಟು ₹ 3,785 ಕೋಟಿ ವೆಚ್ಚಕ್ಕೆ ಲಭ್ಯವಿತ್ತು. ಟೆಂಡರ್‌ ಪಡೆದವರಿಗೆ, ಒಟ್ಟು ಮೊತ್ತದಲ್ಲಿ ಶೇ 40ರಷ್ಟು ಹಣವನ್ನು ಮುಂಗಡವಾಗಿ ನೀಡಲಾಗಿದ್ದು, ಆ ಮೊತ್ತ ಸುಮಾರು ₹ 600 ಕೋಟಿಯಷ್ಟಿದೆ. ₹ 1 ಕೋಟಿಗೂ ಮೀರಿದ ನೂರಾರು ಕಾಮಗಾರಿಗಳನ್ನು ಮಂಡಳಿಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ. ಎಲ್ಲ ಕಾಮಗಾರಿಗಳಿಗೆ ತಡೆ ನೀಡುವಂತೆ ಹೊಸ ಸರ್ಕಾರ ಸೂಚಿಸುತ್ತಿದ್ದಂತೆ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ನಡೆಯಬೇಕಿದ್ದ ₹ 9 ಕೋಟಿಯ ಕಾಮಗಾರಿಗೆ ತಡೆ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.