ADVERTISEMENT

ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕ ವಾಪಸು ಪಡೆಯಿರಿ: ಸಿದ್ದರಾಮಯ್ಯ

ಪ್ರಧಾನಿ ಮೋದಿಗೆ ಸಿದ್ಧರಾಮಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 22:03 IST
Last Updated 18 ಜೂನ್ 2020, 22:03 IST
   

ಬೆಂಗಳೂರು: ‘ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ತಕ್ಷಣ ವಾಪಸು ಪಡೆಯಬೇಕು. ಆ ಮೂಲಕ, ಸಾಮಾನ್ಯ ಜನರಿಗೆ ತೈಲ ದರ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ಹೊರೆ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ತೈಲ ಬೆಲೆ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಯಲ್ಲೂ ಹೆಚ್ಚಳ ಉಂಟಾಗಲಿದೆ. ಕೊರೊನಾದಿಂದ ಈಗಾಗಲೇ ಜನ ತೊಂದರೆ ಅನುಭವಿಸುತ್ತಿದ್ದು, ಕೇಂದ್ರದ ನಡೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ರೈತ ವರ್ಗದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಏರಿಕೆ ಆಗಲಿದೆ. ಜೊತೆಗೆ, ಸಾಗಣೆ ವೆಚ್ಚವೂ ಹೆಚ್ಚಲಿದೆ. ಕೃಷಿ ಉತ್ಪಾದನೆ ಕುಂಠಿತವಾದರೆ ದೇಶದ ಅಭಿವೃದ್ಧಿ ಗತಿ ಕುಸಿತವಾಗಲಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘10 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸುಮಾರು ₹ 5.50ರಷ್ಟು ಹೆಚ್ಚಳವಾಗಿದೆ. ಕಚ್ಚಾ ತೈಲ ದರದ ಬೆಲೆ ಕಡಿಮೆಯಾಗಿರುವ ಸಂದರ್ಭದಲ್ಲಿ ತೈಲ ಬೆಲೆ ಹೆಚ್ಚಿಸಿರುವುದು ಕೇಂದ್ರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಆ ಮೂಲಕ, ಶ್ರಮಿಕರು ಮತ್ತು ಮುಗ್ಧ ಜನರನ್ನು ಕೇಂದ್ರ ಶೋಷಣೆಗೆ ಒಳಪಡಿಸಿದೆ’ ಎಂದೂ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.