ADVERTISEMENT

ಸಿದ್ದರಾಮಯ್ಯ– ಡಿಕೆಶಿ ಗುದ್ದಾಟ: ಹಸ್ತ ಲಾಘವದ ಬದಲು ಸಿಎಂ ಕುರ್ಚಿ ಸುತ್ತ ಗಿರಕಿ

ವೈ.ಗ.ಜಗದೀಶ್‌
Published 20 ಜುಲೈ 2022, 18:45 IST
Last Updated 20 ಜುಲೈ 2022, 18:45 IST
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ   

ವಿಧಾನಸಭೆಗೆ 2023ಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನಾದೇಶ ಸಿಗುವುದೋ, ಇಲ್ಲವೋ ಎಂಬುದೇ ಖಾತ್ರಿ ಇಲ್ಲ. ಆದರೆ, ಅಧಿಕಾರಕ್ಕೇರಿಯೇ ಬಿಟ್ಟೆವೆಂಬ ತುಂಬು ಭರವಸೆಯಲ್ಲಿರುವ ಕಾಂಗ್ರೆಸ್‌ ನಾಯಕರು, ಮುಖ್ಯಮಂತ್ರಿ ಹುದ್ದೆಗೇರಲು ಪೈಪೋಟಿಗೆ ಬಿದ್ದಿದ್ದಾರೆ.‌

ಮತ್ತೊಮ್ಮೆ ಮುಖ್ಯಮಂತ್ರಿಯಾಗಲೇಬೇಕು ಎಂಬ ಹಂಬಲ ಹೊಂದಿರುವ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮದೇ ಕಾರ್ಯತಂತ್ರವನ್ನು ಹೆಣೆದಿರುವುದು ಗುಟ್ಟಾಗಿ ಉಳಿದಿಲ್ಲ. ಪಕ್ಷಕ್ಕೆ ಬಹುಮತ ಬಂದರೆ ಕೆಪಿಸಿಸಿ ಅಧ್ಯಕ್ಷರಾದವರಿಗೆ ಮುಖ್ಯಮಂತ್ರಿ ಪಟ್ಟ ಎಂಬ ಒಂದು ಕಾಲದ ಕಾಂಗ್ರೆಸ್‌ ನಂಬುಗೆಯನ್ನೇ ದೃಢವಾಗಿ ನೆಚ್ಚಿಕೊಂಡಂತಿದ್ದಾರೆ ಡಿ.ಕೆ.ಶಿವಕುಮಾರ್. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೃಪಾಶೀರ್ವಾದ ತಮ್ಮ ಮೇಲಿದೆ ಎಂಬ ವಿಶ್ವಾಸದಲ್ಲಿ ಆಡಳಿತ ಚುಕ್ಕಾಣಿ ತಮ್ಮ ಕೈಗೆ ಸಿಗಬೇಕು ಎಂಬ ಲೆಕ್ಕಾಚಾರದಲ್ಲಿ ಅವರು ರಾಜಕೀಯ ದಾಳ ಉರುಳಿಸಲು ಆರಂಭಿಸಿದ್ದಾರೆ.

75ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಸಿದ್ದರಾಮಯ್ಯ ಅವರ ಪ್ರಭಾವಳಿ ವಿಸ್ತರಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರಿಗೇ ಮುಖ್ಯಮಂತ್ರಿ ಪಟ್ಟ ಸಿಗಬೇಕು ಎಂಬುದು ಜನಾಭಿಪ್ರಾಯ ಎಂದು
ಬಿಂಬಿಸಲು ಅವರ ‘ಆಪ್ತ’ ವಲಯ ಭರ್ಜರಿ ತಯಾರಿ ನಡೆಸಿದೆ. ಒಂದು ಕಾಲದಲ್ಲಿಜನತಾ ಪರಿವಾರದಲ್ಲಿದ್ದು ಹಂತ ಹಂತವಾಗಿ ಕಾಂಗ್ರೆಸ್‌ಗೆ ಸೇರಿದವರು ‘ಅಮೃತ ಮಹೋತ್ಸವ’ದ ಮೂಲಕ ‘ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ’ ಎಂಬ ಹಕ್ಕು ಮಂಡಿಸುವ ಯತ್ನವನ್ನೂ ನಡೆಸಿದ್ದಾರೆ.

ADVERTISEMENT

ಅಮೃತ ಮಹೋತ್ಸವದ ತಯಾರಿಯ ಆರಂಭದ ದಿನಗಳಲ್ಲಿ, ಇದು ಕಾಂಗ್ರೆಸ್‌ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸುವ ಯತ್ನ, ಹಿಂದುಳಿದ ಸಮುದಾಯದವರನ್ನು ಕಾಂಗ್ರೆಸ್‌ ತೆಕ್ಕೆಗೆ ಬರಸೆಳೆಯುವ ಹೊಸ ದಾರಿ ಎಂದು ಹೇಳಲಾಗಿತ್ತು. ದಾವಣಗೆರೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಸೇರಿಸುವುದು ಹಾಗೂ ಜಿಲ್ಲಾ ಮಟ್ಟದಲ್ಲಿ ಅಮೃತ ಮಹೋತ್ಸವ ಆಚರಿಸುವ ಮೂಲಕ ಸಿದ್ದರಾಮಯ್ಯನವರನ್ನು ಮುನ್ನೆಲೆಗೆ ತರುವ ಯತ್ನ ಗೊತ್ತಾಗುತ್ತಿದ್ದಂತೆ ಒಳಗಿಂದೊಳಗೆ ಅಪಸ್ವರ ಶುರುವಾಯಿತು. ಬಹಿರಂಗವಾಗಿ ಯಾರೊಬ್ಬರೂ ಹೇಳಿಕೆ ನೀಡದಿದ್ದರೂ ಪಕ್ಷದ ಆಂತರಿಕ ವಲಯದಲ್ಲಿ ಪಕ್ಷಕ್ಕಿಂತ ವ್ಯಕ್ತಿಯನ್ನು ವೈಭವೀಕರಿಸುವ ‘ಅಮೃತ ಮಹೋತ್ಸವ’ಕ್ಕೆ ತಕರಾರುಗಳು ಶುರುವಾದವು. ಅದು ಬಹಿರಂಗವಾಗುವುದಕ್ಕೆ ಮುನ್ನವೇ, ‘ಪಕ್ಷದ ವೇದಿಕೆಯಲ್ಲೇ ಅಮೃತ ಮಹೋತ್ಸವ ಆಚರಿಸುತ್ತೇವೆ’ ಎಂಬ ಮಾತುಗಳು ಹೊರಬಿದ್ದವು.

ಅಮೃತ ಮಹೋತ್ಸವ ಆಚರಣೆಯ ಸಮಿತಿಯ ನೇತೃತ್ವ ವಹಿಸಿರುವ ಡಾ. ಎಚ್.ಸಿ. ಮಹದೇವಪ್ಪ, ‘ಪಕ್ಷದ ವೇದಿಕೆಯಲ್ಲ; ಇದು ಆಪ್ತರು ಸೇರಿ ನಡೆಸುತ್ತಿರುವ ಕಾರ್ಯಕ್ರಮ’ ಎಂದು ಬಹಿರಂಗವಾಗಿ ಹೇಳುವ ಮೂಲಕ ಬೇರೆಯದೇ ಆದ ‘ಸಂದೇಶ’ವನ್ನು ರವಾನಿಸಿದರು. ಪಕ್ಷ ಹಾಗೂ ಸಿದ್ದರಾಮಯ್ಯನವರ ಆಪ್ತವಲಯ ವಿಭಿನ್ನವೇ ಎಂಬ ಚರ್ಚೆಗೆ ಇದು ಹಾದಿ ಮಾಡಿಕೊಟ್ಟಿತು.

‘ಪಕ್ಷಕ್ಕೆ ಅನುಕೂಲವಾಗುವುದರೆ ಸಿದ್ದರಾಮಯ್ಯನವರ ಜನ್ಮದಿನ ಆಚರಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ನನಗೆ ವ್ಯಕ್ತಿ ಪೂಜೆಗಿಂತ ಪಕ್ಷದ ಸಂಘಟನೆಯೇ ಮುಖ್ಯ’ ಎಂದು ಆರಂಭ ದಿನಗಳಿಂದಲೂ ಡಿ.ಕೆ.ಶಿವಕುಮಾರ್ ಹೇಳುತ್ತಲೇ ಬಂದಿದ್ದರು. ‘ಕಾರ್ಯಕ್ರಮಕ್ಕೆ ಕರೆದಿದ್ದಾರೆ ಹೋಗುತ್ತೇನೆ’ ಎಂದೂ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವುದನ್ನು ಇಷ್ಟಪಡದ ಕಾಂಗ್ರೆಸ್ ನಾಯಕರು, ತಮ್ಮದೇ ಆದ ರೀತಿ
ಯೊಳಗೆ ಅಮೃತ ಮಹೋತ್ಸವಕ್ಕೆ ಮೆಲುದನಿಯಲ್ಲಿ ತಕರಾರು ತೆಗೆಯುತ್ತಿದ್ದಾರೆ.ಆದರೆ,ಅದನ್ನು ಬಹಿರಂಗವಾಗಿ ಟೀಕಿಸಿ, ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರ ವಿರೋಧ ಕಟ್ಟಿಕೊಳ್ಳಲು ಯಾರೊಬ್ಬರೂ ತಯಾರಿಲ್ಲ.

ಈ ಬೆಳವಣಿಗೆಗಳ ಮಧ್ಯೆಯೇ, ಶಿವಕುಮಾರ್ ಅವರು ಹೊಸ ಬಾಣಗಳನ್ನು ಬಿಡಲಾರಂಭಿಸಿದ್ದಾರೆ. ‘ನಾನು ಎಲ್ಲ ಜಾತಿ–ಧರ್ಮಗಳನ್ನು ಪ್ರತಿನಿಧಿಸುವ ಕಾಂಗ್ರೆಸ್ ನಾಯಕ’ ಎಂದು ಹೇಳುತ್ತಿದ್ದ ಅವರು, ‘ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬಂದಿದೆ. ನನ್ನ ಕೈಹಿಡಿದು ಬೆಂಬಲಕ್ಕೆ ನಿಲ್ಲಿ’ ಎಂದು ಬಹಿರಂಗ ಸಭೆಯಲ್ಲಿ ಪ್ರತಿಪಾದಿಸಲು ಶುರು ಮಾಡಿದ್ದಾರೆ.

‘ಎಸ್.ಎಂ.ಕೃಷ್ಣ ಅವರ ಬಳಿಕ ಒಕ್ಕಲಿಗ ಸಮುದಾಯದಿಂದ ನಾನು ಸಿಎಂ ಆಗುವ ಹಂತ ತಲುಪಿದ್ದೇನೆ. ಹೀಗಾಗಿ ನನ್ನ ಕೈಬಲಪ‍ಡಿಸಿ. ನಾನು ಕಾವಿ ಬಟ್ಟೆ ಧರಿಸಿದ ಸನ್ಯಾಸಿಯಲ್ಲ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಹುದ್ದೆಗೆ ನಾನು ಸ್ಪರ್ಧಾಳು ಎಂಬ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮಕ್ಕೆ ಇನ್ನು 13 ದಿನ ಬಾಕಿ ಇರುವಾಗ, ಶಿವಕುಮಾರ್ ಹಾಕುತ್ತಿರುವ ಹೊಸ ವರಸೆ ನಾನಾ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

80ನೇ ವರ್ಷಕ್ಕೆ ಕಾಲಿಡಲಿರುವ ಮಲ್ಲಿಕಾರ್ಜುನ ಖರ್ಗೆ, ‘ನನ್ನ ಹುಟ್ಟುಹಬ್ಬ ಆಚರಿಸುವ ಬದಲು ಬುದ್ದ, ಬಸವ, ಅಂಬೇಡ್ಕರ್ ತತ್ವಗಳನ್ನು, ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ’ ಎಂದು ಕರೆ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ಜನ್ಮದಿನದ ಆಚರಣೆಗೆ ಇದು ವಿರೋಧ ಅಲ್ಲದೇ ಇದ್ದರೂ ಆಚರಣೆಯನ್ನೇ ಪ್ರಶ್ನಿಸುವ ಸಂದೇಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.