ADVERTISEMENT

ಸಿದ್ದರಾಮಯ್ಯ, ನಾನು ಜೊತೆಯಾಗಿಯೇ ನಿವೃತ್ತಿ ಪಡೆಯುತ್ತೇವೆ:  ಎಚ್.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 19:39 IST
Last Updated 23 ನವೆಂಬರ್ 2025, 19:39 IST
<div class="paragraphs"><p>&nbsp;ಎಚ್.ಸಿ. ಮಹದೇವಪ್ಪ&nbsp;&nbsp;</p></div>

 ಎಚ್.ಸಿ. ಮಹದೇವಪ್ಪ  

   

ಬೆಂಗಳೂರು: ‘ರಾಜಕೀಯ ಕ್ಷೇತ್ರದಲ್ಲಿ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಜತೆಗೆ ಸಾಗಿದ್ದು, ಮುಂದಿನ ದಿನಗಳಲ್ಲಿ ಇಬ್ಬರೂ ಜತೆಯಾಗಿಯೇ ರಾಜಕೀಯ ನಿವೃತ್ತಿ ಪಡೆಯುತ್ತೇವೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.   

ಕಲಾ ಗಂಗೋತ್ರಿ ರಂಗ ತಂಡವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಮತ್ತೆ ಮುಖ್ಯಮಂತ್ರಿ’ ನಾಟಕ ಕೃತಿಯನ್ನು ಜನಾರ್ಪಣೆ ಮಾಡಿ, ಮಾತನಾಡಿದರು. 

ADVERTISEMENT

‘ನಾನು 1985ರಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದೆ. ಸಿದ್ದರಾಮಯ್ಯ ಅವರು 1983ರಲ್ಲಿಯೇ ಶಾಸಕರಾಗಿದ್ದರು. ನಂತರ ನಾನು ಹಾಗೂ ಅವರು ಜತೆಗೆ ಸಾಗಿದೆವು. ಈಗ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವ ನಾನು, ರಾಜಕೀಯ ಜೀವನವನ್ನು ಅವರ ಜತೆಗೆ ಕೊನೆ ಮಾಡುತ್ತೇನೆ’ ಎಂದರು.

‘ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ 257 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆಗ ಅವರು ‘ಇನ್ನೆಂದೂ ಚುನಾವಣೆ ಬೇಡಪ್ಪ ನನಗೆ’ ಅಂತ ಹೇಳಿದ್ದರು. ಅವರ ಮೇಲೆ ಚುನಾವಣೆ ಎಷ್ಟು ಪರಿಣಾಮ ಬೀರಿರಬಹುದು ಎಂಬುದು ತಿಳಿಯುತ್ತದೆ. ಹಿಂದೆ ಯೋಗ್ಯರನ್ನು ನೋಡಿ ಚುನಾವಣೆಗೆ ಟಿಕೆಟ್ ನೀಡಲಾಗುತ್ತಿತ್ತು. ಈಗ ಚುನಾವಣೆ ದುಬಾರಿಯಾಗುತ್ತಿದೆ’ ಎಂದು ಹೇಳಿದರು. 

‘ಸಾರ್ವಜನಿಕ ಜೀವನದಲ್ಲಿ ಯೋಗ್ಯರು, ಸಮರ್ಥರು, ವಿವೇಚನೆ ಉಳ್ಳವರು ಕಡಿಮೆಯಾಗುತ್ತಿದ್ದಾರೆ. ಸಾಂಸ್ಕೃತಿಕ ನಾಯಕತ್ವ ನಶಿಸಿಹೋಗುತ್ತಿದೆ’ ಎಂದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ, ಕವಿ ಎಲ್‌.ಹನುಮಂತಯ್ಯ, ಸಾಹಿತಿ ಜಿ. ರಾಮಕೃಷ್ಣ, ನಾಟಕಕಾರ ಕೆ.ವೈ.ನಾರಾಯಣಸ್ವಾಮಿ, ನಟ ‘ಮುಖ್ಯಮಂತ್ರಿ’ ಚಂದ್ರು ಉಪಸ್ಥಿತರಿದ್ದರು. ಬಳಿಕ ‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.