ADVERTISEMENT

ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ: ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 13:21 IST
Last Updated 16 ಫೆಬ್ರುವರಿ 2021, 13:21 IST
ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ
ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ   

ನವದೆಹಲಿ: ‌ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಸಂಜೆ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದರು.

ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ಎ.ಕೆ. ಆಂಟನಿಅವರನ್ನು ಭೇಟಿ ಮಾಡಿದ ಅವರು, ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.

'ರಾಹುಲ್ ಗಾಂಧಿ ಅವರ ಜೊತೆ ರಾಜ್ಯ ರಾಜಕಾರಣದ ‌ಬಗ್ಗೆ ಚರ್ಚಿಸಿರುವೆ. ಆದರೆ, ಚರ್ಚಿತ ‌ವಿಷಯ ಯಾವುದು ಎಂಬುದನ್ನು ಬಹಿರಂಗಪಡಿಸಲಾಗದು' ಎಂದು ಭೇಟಿಯ ನಂತರ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ಹೇಳಿದರು.

ADVERTISEMENT

ಮೀಸಲಾತಿಗೆ ಆಗ್ರಹಪಡಿಸಿ ವಿವಿಧ ಸಮುದಾಯಗಳು ಹೋರಾಟ ನಡೆಸುವುದು ಸೂಕ್ತವಾದದ್ದು. ಆದರೆ, ಸಂಪುಟ ದರ್ಜೆ ಸಚಿವರಾಗಿರುವ ಕೆ.ಎಸ್. ಈಶ್ವರಪ್ಪ ಅವರು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೋರಾಟ ನಡೆಸುತ್ತಿರುವುದು ಸೂಕ್ತವಲ್ಲ ಎಂದು ಅವರು ಪುನರುಚ್ಚರಿಸಿದರು.

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ‌ ಇದೆ. ಈಶ್ವರಪ್ಪ ಅವರು ಕೇಂದ್ರ ಸರ್ಕಾರದ ಗಮನ ಸೆಳೆದು ಕೆಲಸ ಮಾಡಿಸಿಕೊಳ್ಳುವುದನ್ನು ಬಿಟ್ಟು ಪಾದಯಾತ್ರೆ ನಡೆಸುವುದು ಸರಿಯಲ್ಲ ಎಂದು ಹೇಳಿದರು.

ಕುಲಶಾಸ್ತ್ರ ಅಧ್ಯಯನದ‌ ವರದಿ ಬರುವ ತನಕ ಹೊಸದಾಗಿ ಯಾವುದೇ ಸಮುದಾಯವನ್ನೂ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಲಾಗದು. ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಸಿದ ನಂತರ‌ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಬಹುದು. ಸಂವಿಧಾನಕ್ಕೆ‌ ತಿದ್ದುಪಡಿ ತಂದು ಅರ್ಹ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಪಕ್ಷದ ರಾಜ್ಯ ಮುಖಂಡರಾದ ಜಮೀರ್ ಅಹಮದ್ ಖಾನ್, ಅಶೋಕ ಪಟ್ಟಣ, ಪ್ರಕಾಶ್ ರಾಠೋಡ, ಎಚ್.ಎಂ‌. ರೇವಣ್ಣ ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.