ಬೆಂಗಳೂರು: ಜಿಎಸ್‌ಟಿ ದರಗಳಲ್ಲಿನ ಪರಿಷ್ಕರಣೆಯು ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಹೆಚ್ಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಡೋಂಗಿ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರು ದಸರಾ ಅಂಗವಾಗಿ ಸೋಮವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಎಸ್‌ಟಿ ಜಾರಿ ಮಾಡಿದ್ದೂ ಅವರೇ, ಜಿಎಸ್‌ಟಿ ಹೆಚ್ಚೆಚ್ಚು ವಿಧಿಸಿದ್ದೂ ಅವರೇ, ಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ತಾ ಇರೋದೂ ಅವರೇ. ಹಾಗಾದರೆ ಇಷ್ಟು ವರ್ಷ ಹೆಚ್ಚು ಜಿಎಸ್‌ಟಿ ಹಾಕಿ ಜನರನ್ನು ಸುಲಿಗೆ ಮಾಡುವಾಗ ನಿಮ್ಮ ಈ ಕಾಳಜಿ ಎಲ್ಲಿ ಹೋಗಿತ್ತು? ಎಂಟು ವರ್ಷ ವಿಪರೀತ ಜಿಎಸ್‌ಟಿ ವಸೂಲಿ ಮಾಡಿದ್ರಲ್ಲಾ ಪ್ರಧಾನಿ ಮೋದಿಯವರೇ ಅದೆಲ್ಲವನ್ನೂ ಭಾರತೀಯರಿಗೆ ವಾಪಾಸ್ ಕೊಡ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಜಿಎಸ್‌ಟಿ ಶೇ 18, ಶೇ 28 ರಷ್ಟು ಹೆಚ್ಚಿಸಿದ್ದರ ಬಗ್ಗೆ ವಿರೋಧ ಮಾಡಿದವರು ನಾವು. ಇಷ್ಟು ವರ್ಷ ವಸೂಲಿ ಮಾಡಿದವರೇ ಈಗ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಭಾರತೀಯರಿಗೆ ಎಷ್ಟು ನಾಜೂಕಾಗಿ ಟೋಪಿ ಹಾಕ್ತಾರೆ ನೋಡಿ. ನೀವು ಇದಕ್ಕೆಲ್ಲಾ ಮರಳಾಗಬಾರದು. ಬಡವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಜಾರಿಗೆ ತಂದು 10 ಕೆ.ಜಿ ಅಕ್ಕಿ ಕೊಟ್ಟಿದ್ದೇ ಈ ಸಿದ್ದರಾಮಯ್ಯ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.