ADVERTISEMENT

ಮೋದಿಗೆ ಸ್ಪರ್ಧೆ ನೀಡಲು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 16:01 IST
Last Updated 7 ಜುಲೈ 2025, 16:01 IST
   

ನವದೆಹಲಿ: ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಪರ್ಧೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತರಲು ಕಾಂಗ್ರೆಸ್‌ ಹೊರಟಿದೆ ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದರು. 

ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಮೋದಿ ಅವರು ಒಬಿಸಿ ನಾಯಕರು. ಅವರಿಗೆ ಸ್ಪರ್ಧೆ ನೀಡಲು ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಮಟ್ಟದ ನಾಯಕರು ಇಲ್ಲ. ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಸ್ಪರ್ಧೆ ನೀಡಲು ಆಗುತ್ತಿಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ರಾಷ್ಟ್ರಮಟ್ಟಕ್ಕೆ ಕರೆದುಕೊಂಡು ಬರಬಹುದು ಅನಿಸುತ್ತದೆ’ ಎಂದರು. 

ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಪ್ರಧಾನಿ ಅವರಿಗೆ ಸರಿಸಮಾನವಾದ ನಾಯಕ ಅಲ್ಲ. ಹೈಕಮಾಂಡ್‌ ಮನವೊಲಿಕೆಗೆ ಮಣಿದು ಮುಖ್ಯಮಂತ್ರಿ ಸ್ಥಾನ ಬಿಟ್ಟು ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಬರಲಿದ್ದಾರೆ ಎಂದರು. 

ADVERTISEMENT

‘ಮಹರ್ಷಿ ವಾಲ್ಮಿಕಿ ನಿಗಮದಲ್ಲಿ ವ್ಯಾಪಕ ಅವ್ಯವಹಾರ ಆಗಿದೆ. ಈ ಬಗ್ಗೆ ಮಾಹಿತಿ ನೀಡಲು ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತೇನೆ’ ಎಂದರು. 

’ನಿಗಮದಲ್ಲಿ ₹187 ಕೋಟಿ ಅವ್ಯವಹಾರ ಆಗಿದೆ. ಈ ಪೈಕಿ, ಶೇ 50ರಷ್ಟು ಮೊತ್ತವನ್ನು ನಿಗಮದ ಖಾತೆಗೆ ವಾಪಸ್‌ ಹಾಕಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಹಾಗಿದ್ದರೆ, ಬಜೆಟ್‌ನ 3 ಲಕ್ಷ ಕೋಟಿ ಮೊತ್ತವನ್ನು ತೆಗೆದು ಸ್ವಂತ ಕೆಲಸಕ್ಕೆ ಬಳಸಿಕೊಳ್ಳಲಿ. ಮತ್ತೆ ಅದನ್ನು ಖಜಾನೆಗೆ ಹಾಕಲಿ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.