ADVERTISEMENT

ಉಳ್ಳವರಿಗೇ ಹೊಲದೊಡೆಯನ ಪಟ್ಟ: ಸಿದ್ದರಾಮಯ್ಯ ಆಕ್ರೋಶ

ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 21:27 IST
Last Updated 12 ಜೂನ್ 2020, 21:27 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಉಳ್ಳವರೇ ಭೂಮಿ ಒಡೆಯರು ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಸಚಿವ ಸಂಪುಟದ ನಿರ್ಧಾರದ ಕುರಿತಂತೆ ಗುರುವಾರ ಇಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರ ಸರ್ಕಾರ ಉಳುವವರನ್ನೇ ಭೂಮಿ ಒಡೆಯರನ್ನಾಗಿ ಮಾಡಿತ್ತು. ಆದರೆ ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ದೇಶ ಕಾರ್ಪೊರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ ಕೃಷಿ ಭೂಮಿ ಧಾರೆ ಎರೆಯುವುದಾಗಿದೆ’ ಎಂದು ಆರೋಪಿಸಿದರು.

‘ಭೂಸುಧಾರಣೆ ಕಾಯ್ದೆಯ 79ಎ,ಬಿ, ಸಿ ಮತ್ತು 80 ಹಾಗೂ ಸೆಕ್ಷನ್ 63 ಮುಖ್ಯ ತಿದ್ದುಪಡಿಗಳನ್ನು ಪೂರ್ವಾನ್ವಯ ಆಗುವಂತೆ ರದ್ದು ಮಾಡುವುದು ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ವಜಾ ಮಾಡುವುದು ಸರ್ಕಾರದ ಉದ್ದೇಶವಾಗಿದೆ’ ಎಂದರು.

ADVERTISEMENT

‘ಕಾನೂನಿನಲ್ಲಿ ನ್ಯೂನತೆ ಇದ್ದರೆ ಕಾಲ ಕಾಲಕ್ಕೆ ಬದಲಾವಣೆ ಮಾಡಬೇಕು. ಅದನ್ನು ಬಿಟ್ಟು ತಿದ್ದುಪಡಿ ಮಾಡಿದರೆ ಭೂ ಮಾಫಿಯಾ ಆರಂಭವಾಗುತ್ತದೆ. ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಾಗುತ್ತದೆ. ಶ್ರೀಮಂತರು ಭೂಮಿ ಖರೀದಿ ಮಾಡಿ ಭೂ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ಇದರಿಂದ ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗಿ ಭೂಮಿ ಕಳೆದುಕೊಂಡು ಅವರು ಕೃಷಿ ಕೂಲಿ ಕಾರ್ಮಿಕರಾಗುತ್ತಾರೆ. ಹೀಗಾಗಿ ಸಂಪುಟದ ನಿರ್ಣಯವನ್ನು ತೀವ್ರವಾಗಿ ವಿರೋಧಿಸುತ್ತೇವೆ’ ಎಂದರು.

‘ಈ ಕುರಿತು ಪಕ್ಷದ ಹಿರಿಯ ನಾಯಕರು, ರೈತರ ಸಂಘಟನೆಗಳ ಮುಖಂಡರ ಜೊತೆ ಮತ್ತೊಂದು ಸುತ್ತಿನಲ್ಲಿ ಸಮಗ್ರವಾಗಿ ಚರ್ಚೆ ನಡೆಸುತ್ತೇವೆ’ ಎಂದು ಅವರು ಹೇಳಿದರು.

ಇದಕ್ಕೆ ಮುನ್ನ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, 79 ಎ,ಬಿ ಸೆಕ್ಷನ್‌ಗಳೇ ಅರಸು ಅವರು ತಂದಿದ್ದ ಭೂಸುಧಾರಣೆ ಕಾಯ್ದೆಯ ಆತ್ಮಗಳು. ಅವುಗಳನ್ನು ತೆಗೆಯುವುದೆಂದರೆ ಅದು ಕಾಯ್ದೆ ತಿದ್ದುಪಡಿಯಲ್ಲ. ಕಾಯ್ದೆಯನ್ನೇ ರದ್ದು ಮಾಡಿದ ಕ್ರಮವಾಗಲಿದೆ‘ ಎಂದರು.

‘ಹಣ ವಸೂಲಿ ದಂಧೆ ತಪ್ಪಿಸಲು ತಿದ್ದುಪಡಿ’
ದಾವಣಗೆರೆ: ಕರ್ನಾಟಕ ಭೂ ಸುಧಾರಣಾ ಕಾಯ್ದೆಯಿಂದ ಯಾವುದೇ ಅನುಕೂಲಗಳು ಇರಲಿಲ್ಲ. ಬದಲಾಗಿ ಅಸಿಸ್ಟೆಂಟ್ ಕಮಿಷನರ್‌ಗಳಿಗೆ ಹಣ ವಸೂಲಿ ಮಾಡಿಕೊಳ್ಳುವ ದಂಧೆಯಾಗಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಈ ಬಗ್ಗೆ ಜನರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಿ ತಿದ್ದುಪಡಿ ತರುವ ತೀರ್ಮಾನ ಕೈಗೊಳ್ಳಲಾಯಿತು’ ಎಂದರು.

‘ಯುವಕರು ಕೃಷಿಯತ್ತ ಹೆಚ್ಚು ಆಕರ್ಷಿತರಾಗಲಿದ್ದಾರೆ’
ಬೆಂಗಳೂರು: ‘ಈ ದೇಶದಲ್ಲಿ ಎಲ್ಲರಿಗೂ ಫಸಲು ಬೆಳೆಯುವ ಹಕ್ಕಿದೆ. ಕೃಷಿ ಭೂಮಿ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದಾಗಿ ಯುವಕರು ಕೃಷಿಯತ್ತ ಹೆಚ್ಚು ಆಕರ್ಷಿತರಾಗಲಿದ್ದಾರೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಇಲ್ಲಿ ಶುಕ್ರವಾರ ಮುಂಗಾರು ಹಂಗಾಮಿನ ಕಾರ್ಯಾಗಾರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ‘ಕೃಷಿ ವಿಶ್ವವಿದ್ಯಾಲಯಗಳಿಂದ ನಾಲ್ಕು ಲಕ್ಷ ಪದವೀಧರರು ಪ್ರತಿ ವರ್ಷ ಹೊರಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ಕಷ್ಟ. ಕೃಷಿ ಆಧಾರಿತ ಕೈಗಾರಿಕೆಗಳ ಜತೆಗೆ ಸಂಸ್ಕರಣಾ ಘಟಕ, ಶೀಥಲೀಕರಣ ಘಟಕ, ಆಹಾರ ಉತ್ಪಾದನಾ ಘಟಕಗಳ ಸ್ಥಾಪನೆಗೂ ಇನ್ನು ಮುಂದೆ ಕೃಷಿ ಭೂಮಿ ಬಳಕೆಯಾಗುವುದು ಇನ್ನು ಸಾಧ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.