ಸಿಎಂ ಸಿದ್ದರಾಮಯ್ಯ
ಬೆಂಗಳೂರು: ‘ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಾಕಷ್ಟು ಬಾರಿ ಕಾಲ್ತುಳಿತ ಪ್ರಕರಣಗಳು ನಡೆದಿವೆ. ಆದರೆ, ಯಾವುದಾದರೂ ಒಬ್ಬ ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದಾರಾ ಮತ್ತು ಕ್ಷಮೆ ಕೇಳಿದ್ದಾರಾ? ಇಲ್ಲಿ ನಮಗೆ ಪಾಠ ಹೇಳಲು ಬಂದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಆರ್‌ಸಿಬಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಶುಕ್ರವಾರ ಉತ್ತರ ನೀಡಿದ ಅವರು, ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
‘ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿದ್ದಕ್ಕೆ ಈಗಲೂ ವಿಚಲಿತನಾಗಿದ್ದೇನೆ, ದುಃಖಪಡುತ್ತಿದ್ದೇನೆ. ಆ ಘಟನೆಗಾಗಿ ಮತ್ತೊಮ್ಮೆ ವಿಷಾದಿಸುತ್ತೇನೆ’ ಎಂದ ಸಿದ್ದರಾಮಯ್ಯ, ‘ವರನಟ ಡಾ.ರಾಜ್‌ಕುಮಾರ್ ಮೃತಪಟ್ಟಾಗ ನಡೆದ ಗೋಲಿಬಾರ್‌ನಲ್ಲಿ ಹಲವರು ಸತ್ತರು ಆಗ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೇ? ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಆಮ್ಲಜನಕ ಸಿಗದೇ ಹಲವರು ಮೃತಪಟ್ಟಾಗ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದರೆ’ ಎಂದು ಅವರು ಪ್ರಶ್ನಿಸಿದರು.
‘ಆರ್‌ಸಿಬಿ 18 ವರ್ಷಗಳ ಬಳಿಕ ಕಪ್ ಗೆದ್ದ ಕಾರಣ ಒಂದು ರೀತಿ ಸಮೂಹ ಸನ್ನಿ ಸೃಷ್ಟಿಯಾಯಿತು. ಜನ ಕರ್ನಾಟಕವೇ ಗೆದ್ದುಬಿಟ್ಟಿದೆ, ಬೆಂಗಳೂರಿನ ಅಸ್ಮಿತೆ ಎಂದು ಭಾವಿಸಿದರು. ಗೆಲುವಿನ ದಿನ ರಾತ್ರಿ ಇಡೀ ರಾಜ್ಯದಲ್ಲಿ ವಿಜಯೋತ್ಸವ ನಡೆದಿತ್ತು. ಇದು ಸಮೂಹ ಸನ್ನಿಗೂ ಕಾರಣವಾಯಿತು. ಇತರ ಯಾವುದೇ ತಂಡಕ್ಕಿಂತಲೂ ಆರ್‌ಸಿಬಿಗೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ಆರ್‌ಸಿಬಿ ಗೆದ್ದಿದ್ದರಿಂದ ವಿಜಯೋತ್ಸವ ಮಾಡುವುದು ಬೇಡ ಎಂದು ಗೋವಿಂದರಾಜ್‌ಗೆ ಹೇಳಿದೆ. ಅಷ್ಟಕ್ಕೂ ಆ ತಂಡದಲ್ಲಿ ಕರ್ನಾಟಕದವರು ಯಾರೂ ಇರಲಿಲ್ಲ ಎಂದು ಹೇಳಿದ್ದೆ’ ಎಂದರು.
‘ಎಷ್ಟೇ ವಿರೋಧ ಮಾಡಿದರೂ ಜನರ ಆಶೋತ್ತರಗಳಿಗೆ ಸರ್ಕಾರ ಮಣಿಯಬೇಕಾಗುತ್ತದೆ. ಜನರ ಆಶೋತ್ತರಗಳಿಗೆ ಬೆಲೆ ಕೊಡಬೇಕಾದುದು ಪ್ರಜಾತಂತ್ರದ ಲಕ್ಷಣ. ವಿಜಯೋತ್ಸವಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ‘ಎಕ್ಸ್’ ಮಾಡಿರಲಿಲ್ಲವೇ, ಅನುಮತಿ ಕೊಡದೇ ಇದ್ದರೆ ಬಿಜೆಪಿಯವರು ಅದಕ್ಕೂ ಹೋರಾಟ ಮಾಡುತ್ತಿದ್ದರು’ ಎಂದು ಸಿದ್ದರಾಮಯ್ಯ ತಿವಿದರು.
‘ಆರ್‌ಸಿಬಿ ಜತೆ ಪೊಲೀಸರು ಶಾಮೀಲಾಗಿ ಅಲ್ಲಿ ಕಾರ್ಯಕ್ರಮ ನಡೆಯಲು ಬಿಟ್ಟರು. ಅದೇ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆವು. ಆರ್‌ಸಿಬಿ, ಡಿಎನ್‌ಎ ಅಧಿಕಾರಿಗಳನ್ನೂ ಬಂಧಿಸಿದ್ದೇವೆ. ಮೃತ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ಕೊಟ್ಟೆವು, ಎಲ್ಲರೂ ಪರಿಹಾರದ ಚೆಕ್ ಪಡೆದುಕೊಂಡಿದ್ದಾರೆ’ ಎಂದರು.
ಕಾಲ್ತುಳಿತ ದುರಂತದ ಬಗ್ಗೆ ‘ಪ್ರಜಾವಾಣಿ’ಯ ಸಂಪಾದಕೀಯದ ಕುರಿತು ಸಿದ್ದರಾಮಯ್ಯ ಮತ್ತು ಆರ್.ಅಶೋಕ ಅವರು ಪ್ರಸ್ತಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.