ADVERTISEMENT

ಎರಡು ರಕ್ಷಣಾ ಕಾರಿಡಾರ್ ಮಂಜೂರು ಮಾಡುವಂತೆ ರಾಜನಾಥ್ ಸಿಂಗ್‌ಗೆ ಸಿದ್ದರಾಮಯ್ಯ ಮನವಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 16:30 IST
Last Updated 9 ಜುಲೈ 2025, 16:30 IST
ರಾಜನಾಥ ಸಿಂಗ್ ಅವರೊಂದಿಗೆ ಸಿದ್ದರಾಮಯ್ಯ ಚರ್ಚಿಸಿದರು. 
ರಾಜನಾಥ ಸಿಂಗ್ ಅವರೊಂದಿಗೆ ಸಿದ್ದರಾಮಯ್ಯ ಚರ್ಚಿಸಿದರು.    

ನವದೆಹಲಿ: ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ ಧಾರವಾಡ-ಬೆಳಗಾವಿ-ವಿಜಯಪುರ ಜಿಲ್ಲೆಗಳಿಗೆ ಎರಡು ಪ್ರತ್ಯೇಕ ರಕ್ಷಣಾ ಕಾರಿಡಾರ್‌ಗಳನ್ನು ಮಂಜೂರು ಮಾಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ನಿಯೋಗವು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಬುಧವಾರ ಇಲ್ಲಿ ಮನವಿ ಸಲ್ಲಿಸಿತು. 

ಕೇಂದ್ರ ಸರ್ಕಾರವು 2018ರಲ್ಲಿ ಉತ್ತರಪ್ರದೇಶ ಮತ್ತು ತಮಿಳುನಾಡಿಗೆ ರಕ್ಷಣಾ ಕಾರಿಡಾರ್‌ ಮಂಜೂರು ಮಾಡಿದೆ. ಆದರೆ, ದೇಶದ ರಕ್ಷಣಾ ಮತ್ತು ವೈಮಾಂತರಿಕ್ಷ ವಲಯದಲ್ಲಿ ಕರ್ನಾಟಕವು ಶೇ 75ರಷ್ಟು ಪಾಲು ಹೊಂದಿದ್ದು, ಜಾಗತಿಕವಾಗಿ ಮೂರನೇ ಅತ್ಯುತ್ತಮ ಕಾರ್ಯಪರಿಸರ ಹೊಂದಿರುವ ಹೆಗ್ಗಳಿಕೆ ಸಂಪಾದಿಸಿದೆ. ಹೀಗಾಗಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳಿಗೆ ಒಂದೊಂದು ರಕ್ಷಣಾ ಕಾರಿಡಾರ್‌ ಮಂಜೂರು ಮಾಡಿದರೆ, ಇದು ಮೇಕ್‌ ಇನ್‌ ಇಂಡಿಯಾ ಉಪಕ್ರಮಕ್ಕೂ ಬಲ ತುಂಬುತ್ತದೆ ಎಂದು ಸಿದ್ದರಾಮಯ್ಯ ಮನದಟ್ಟು ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಪೂರಕ ಮಾಹಿತಿ ಒದಗಿಸಿದರು.

ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ರಕ್ಷಣಾ ವಲಯದ ಉತ್ಪಾದನಾ ಕಂಪನಿಗಳಾದ ಬಾಲೂ ಫೋರ್ಜ್‌, ಏಕಸ್‌, ಬಿಕಾರ್‌ ಏರೋಸ್ಪೇಸ್‌, ವಾಲ್‌ಚಂದ್‌ ನಗರ್‌ ಇಂಡಸ್ಟ್ರೀಸ್‌ ಮುಂತಾದವು ನೆಲೆಯೂರಿವೆ. ಜತೆಗೆ ಬೆಳಗಾವಿಯಲ್ಲಿ 250 ಎಕರೆಯಲ್ಲಿ ಪ್ರಿಸಿಶನ್‌ ಉತ್ಪಾದನೆಯ ವಿಶೇಷ ಆರ್ಥಿಕ ವಲಯವು ಸಕ್ರಿಯವಾಗಿದೆ. ಇಲ್ಲಿ 31 ಘಟಕಗಳಿದ್ದು, 5 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ ಎಂದು ಗಮನಕ್ಕೆ ತಂದರು.

ADVERTISEMENT

ದಕ್ಷಿಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ರಕ್ಷಣಾ ಸಾಮಗ್ರಿ ಮತ್ತು ವೈಮಾಂತರಿಕ್ಷ ಕಂಪನಿಗಳಾದ ಸಾರ್ವಜನಿಕ ವಲಯದ ಎಚ್‌ಎಎಲ್‌, ಕಾಲಿನ್ಸ್‌ ಏರೋಸ್ಪೇಸ್‌, ಡೈನಮ್ಯಾಟಿಕ್‌ ಟೆಕ್ನಾಲಜೀಸ್‌, ಸೆಂಟಮ್, ಸಾಸ್ಮೋಸ್‌, ಬೆಲ್ಲಾಟ್ರಿಕ್ಸ್‌ ಮುಂತಾದವು ಇವೆ. ಇವುಗಳೊಂದಿಗೆ ಟಿಎಎಸ್‌ಎಲ್‌ ತನ್ನ ಅಂತಿಮ ಜೋಡಣಾ ಘಟಕ ಆರಂಭಿಸುತ್ತಿದೆ. ಏರ್‌ ಇಂಡಿಯಾ ಮತ್ತು ಇಂಡಿಗೋ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ತಮ್ಮ ಎಂಆರ್‌ಒ ಘಟಕಗಳನ್ನು ಬೆಂಗಳೂರಿನ ಸಮೀಪದಲ್ಲಿ ಸ್ಥಾಪಿಸುತ್ತಿವೆ. ದೇವನಹಳ್ಳಿಯಲ್ಲಿ 2 ಸಾವಿರ ಎಕರೆ ವಿಸ್ತಾರದ ಹೈಟೆಕ್‌ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಇದೆ. ಈ ಭಾಗದಲ್ಲಿ ದೇಶದ ಏರ್‌ಕ್ರಾಫ್ಟ್‌ ಮತ್ತು ಸ್ಪೇಸ್‌ಕ್ರಾಫ್ಟ್‌ ವಲಯದ ಶೇಕಡ 25ರಷ್ಟು ತಯಾರಿಕೆ ನಡೆಯುತ್ತಿದೆ. ವಿಮಾನ ಮತ್ತು ಹೆಲಿಕಾಪ್ಟರ್‌ ತಯಾರಿಕೆಯಲ್ಲಿ ರಾಜ್ಯದ ಕೊಡುಗೆ ಶೇ 67ರಷ್ಟಿದೆ. ಇವೆಲ್ಲವನ್ನೂ ಪರಿಗಣಿಸಿ, ಕಾರಿಡಾರ್‌ಗಳನ್ನು ಮಂಜೂರು ಮಾಡಬೇಕೆಂದು ನಿಯೋಗ ಒತ್ತಾಯಿಸಿತು.

ನಿಯೋಗದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಇಂಧನ ಸಚಿವ ಕೆ.ಜೆ. ಜಾರ್ಜ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಇದ್ದರು.

ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ: ಸಿಎಂ 

ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ‌ ಪ್ರದರ್ಶನ ಹಾಗೂ ಬೆಂಗಳೂರಿನಲ್ಲಿ ರಕ್ಷಣಾ ಕಾರಿಡಾರ್ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡುವ ಸರ್ಕಾರದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.  ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ಕೋರಲಾಗಿದ್ದು ಗುರುವಾರ ಭೇಟಿಯಾಗುವ ಸಾಧ್ಯತೆಯಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.