ADVERTISEMENT

ಪ್ರೀತಿ, ವಿಶ್ವಾಸ, ಸಹಿಷ್ಣುತೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 17:12 IST
Last Updated 8 ಸೆಪ್ಟೆಂಬರ್ 2025, 17:12 IST
ಶಿವಾಜಿನಗರದಲ್ಲಿರುವ ಸೇಂಟ್‌ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ಸೋಮವಾರ ನಡೆದ ‘ಸೇಂಟ್‌ ಮೇರಿ ಉತ್ಸವ’ದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಶಿವಾಜಿನಗರದಲ್ಲಿರುವ ಸೇಂಟ್‌ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ಸೋಮವಾರ ನಡೆದ ‘ಸೇಂಟ್‌ ಮೇರಿ ಉತ್ಸವ’ದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ‘ಅನೇಕ ಜಾತಿ, ಧರ್ಮ, ಸಂಸ್ಕೃತಿ ಇರುವ ದೇಶ ನಮ್ಮದು. ಇಲ್ಲಿ ಪ್ರೀತಿ, ವಿಶ್ವಾಸ ಮತ್ತು ಸಹಿಷ್ಣುತೆ ಇದ್ದರೆ ಮಾತ್ರ ಮನುಷ್ಯತ್ವ ಇರಲು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ಸೋಮವಾರ ನಡೆದ ಸಂತ ಮೇರಿ ಮಾತೆಯ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ನಾವು ವಿವಿಧತೆಯಲ್ಲಿ ಏಕತೆಯನ್ನು ಕಂಡವರು. ನಮ್ಮ ಸರ್ಕಾರ ಈ ಬಗ್ಗೆ ಬಲವಾದ ನಂಬಿಕೆಯನ್ನು ಇಟ್ಟುಕೊಂಡಿದೆ. ಎಲ್ಲ ಧರ್ಮಗಳನ್ನೂ ಸಮಾನ ಗೌರವದಿಂದ ಕಾಣುವ ವ್ಯವಸ್ಥೆ ನಮ್ಮದಾಗಿದೆ. ಸರ್ಕಾರಕ್ಕೆ ಎಲ್ಲ ಧರ್ಮಗಳೂ ಒಂದೇ’ ಎಂದು ಹೇಳಿದರು.

ADVERTISEMENT

‘ಜಾತಿ, ವರ್ಗ ಹೋಗಬೇಕು. ಸಮಾನತೆಯಿಂದ ಬಾಳಬೇಕು ಎಂದು ಅನೇಕ ಸಮಾಜ ಸುಧಾರಕರು ಶ್ರಮಿಸಿದ್ದರು. ಎಲ್ಲ ಧರ್ಮಗಳ ಮೂಲವೇ ದಯೆಯಾಗಿದ್ದು, ಇದನ್ನೇ 12ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದರು. ಅದಕ್ಕಿಂತ ಮೊದಲು ಬುದ್ಧ, ಯೇಸುಕ್ರಿಸ್ತರು ಹೇಳಿದ್ದರು. ಆ ನಂತರ ಗಾಂಧೀಜಿ, ಅಂಬೇಡ್ಕರ್‌ ಕೂಡ ಅದನ್ನೇ ಹೇಳಿದ್ದು, ನಮ್ಮ ಸಂವಿಧಾನದ ಆಶಯವೂ ಅದೇ ಆಗಿದೆ’ ಎಂದು ಹೇಳಿದರು.

‘ನಾವು ಬೇರೆ ಧರ್ಮದವರನ್ನು ಪ್ರೀತಿಸಬೇಕು. ದ್ವೇಷಿಸುವ ಕೆಲಸವನ್ನು ಮಾಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಎಲ್ಲ ಧರ್ಮದವರು ಸ್ವೀಕರಿಸಬೇಕು. ಆಗ ಎಲ್ಲರೂ ಸಮಾನ ಗೌರವದಿಂದ ಬದುಕಲು ಸಾಧ್ಯ’ ಎಂದರು.

‘ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದೇವೆ. ಈ ಬಾರಿ ₹ 250 ಕೋಟಿ ಮೀಸಲಿಟ್ಟಿದ್ದೇವೆ. ಆರ್ಥಿಕವಾಗಿ ಬಡವರಾಗಿರುವವರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದೇವೆ. ಇದೇ ರೀತಿ ಎಲ್ಲ ಧರ್ಮ, ಜಾತಿಗಳ ಬಡವರನ್ನು ಮೇಲೆತ್ತುವ ಯೋಜನೆಗಳನ್ನು ರೂಪಿಸಿದ್ದೇವೆ. ಗ್ಯಾರಂಟಿ ಯೋಜನೆಗಳ ಉದ್ದೇಶವೂ ಇದೇ ಆಗಿದೆ’ ಎಂದು ವಿವರಿಸಿದರು.

ಬೆಂಗಳೂರು ಧರ್ಮಕ್ಷೇತ್ರದ ಆರ್ಚ್ ಬಿಷಪ್ ಪೀಟರ್ ಮಚಾಡೊ ಸಾನ್ನಿಧ್ಯ ವಹಿಸಿದ್ದರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಇಂಧನ ಸಚಿವ ಕೆ.ಜೆ. ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿವಿಧ ಧರ್ಮಗುರುಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.