ADVERTISEMENT

‘ಧರ್ಮ’ ವಿಭಜನೆ: ಡಿಕೆಶಿಗೆ ಸಿದ್ದರಾಮಯ್ಯ ತಿರುಗೇಟು

ಶಿವಕುಮಾರ್‌ ಹೇಳಿಕೆಗೆ ಜಾಗತಿಕ ಲಿಂಗಾಯತ ಮಹಾಸಭಾ ಆಕ್ರೋಶ; ಷಡ್ಯಂತ್ರದ ಶಂಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 19:07 IST
Last Updated 20 ಅಕ್ಟೋಬರ್ 2018, 19:07 IST
.
.   

ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮದ ವಿಷಯ ಕಾಂಗ್ರೆಸ್‌ನಲ್ಲಿ ಭಿನ್ನಮತದ ಕಿಡಿ ಹೊತ್ತಿಸಿದ್ದು, ಸಮರ್ಥನೆ–ಅಸಹನೆಯ ಮಾತುಗಳಿಗೆ ಕಾರಣವಾಗಿದೆ.

‘ಧರ್ಮದ ವಿಚಾರದಲ್ಲಿ ಕೈ ಹಾಕಬಾರದಿತ್ತು’ ಎಂದು ಹೇಳಿದ್ದ ಸಚಿವ ಡಿ.ಕೆ. ಶಿವಕುಮಾರ್‌, ಹಿಂದಿನ ಕಾಂಗ್ರೆಸ್‌ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಶನಿವಾರ ಅದಕ್ಕೆ ತಿರುಗೇಟು ಕೊಟ್ಟ ಹಿಂದಿನ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು, ಸಚಿವ ಸಂಪುಟ ಕೈಗೊಂಡ ಒಮ್ಮತದ ತೀರ್ಮಾನ
ದಲ್ಲಿ ಶಿವಕುಮಾರ್ ಕೂಡ ಪಾಲುದಾರರಾಗಿದ್ದರು ಎಂದು ಪರೋಕ್ಷವಾಗಿ ತಿವಿದಿದ್ದಾರೆ.

ತಮ್ಮ ನಾಯಕನ ಹೇಳಿಕೆಗೆ ಮತ್ತೆ ಪ್ರತಿಕ್ರಿಯಿಸಿರುವ ಶಿವಕುಮಾರ್‌, ‘ಲಿಂಗಾಯತ ಧರ್ಮ ಕುರಿತ ಹೇಳಿಕೆಗೆ ನಾನು ಈಗಲೂ ಬದ್ಧ.‌ ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

ADVERTISEMENT

ನನ್ನೊಬ್ಬನ ತೀರ್ಮಾನವಲ್ಲ– ಸಿದ್ದರಾಮಯ್ಯ: ‘ಸ್ವತಂತ್ರ ಧರ್ಮದ ತೀರ್ಮಾನದಲ್ಲಿ ಸಚಿವ ಸಂಪುಟದ ಎಲ್ಲ ಸದಸ್ಯರೂ ಭಾಗಿಯಾಗಿದ್ದರು. ಅದು ನನ್ನೊಬ್ಬನ ತೀರ್ಮಾನ ಆಗಿರಲಿಲ್ಲ’ ಎಂದರು.

‘ಸರ್ಕಾರದ ತೀರ್ಮಾನಕ್ಕೂ ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ಸಂಬಂಧವಿಲ್ಲ. ಇದು ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ. ಈ ಬಗ್ಗೆ ನನಗೆ ವಿಷಾದವೂ ಇಲ್ಲ’ ಎಂದರು.

ರಾಜಕಾರಣಿಗಳ ಹಸ್ತಕ್ಷೇಪ ಸಲ್ಲ: ‘ಲಿಂಗಾಯತ ಧರ್ಮದ ವಿಚಾರವನ್ನು ಆ ಸಮಾಜದ ಮಠಾಧೀಶರು, ಹಿರಿಯರು ಸೇರಿಕೊಂಡು ಬಗೆಹರಿಸಿಕೊಳ್ಳುತ್ತಾರೆ. ರಾಜಕಾರಣಿಗಳು ಇಂಥ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು’ ಎಂದು ಸಚಿವ ಶಿವಕುಮಾರ್‌ ‍‍ಪುನರುಚ್ಚರಿಸಿದರು.

‘ಧರ್ಮ, ಸಂಪ್ರದಾಯ, ಸಂಸ್ಕತಿ ವಿಚಾರದಲ್ಲಿ ರಾಜಕಾರಣಿಗಳು ಭಾಗಿಯಾಗಬಾರದು. ಒಕ್ಕಲಿಗರ ಸಂಘದ ವಿಚಾರದಲ್ಲಿ ರಾಜಿ ಮಾಡೋಕೆ ಹೋಗಿದ್ದೆ. ಆದರೆ, ಬೇಡ ಅಂತ ಸುಮ್ಮನಾದೆ’ ಎಂದರು.

ನಮ್ಮ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿದ್ದ ಶಿವಕುಮಾರ್‌, ಈಗ ವಿರೋಧ ಮಾಡುತ್ತಿರುವುದರ ಹಿಂದೆ ಅನೇಕ ಶಕ್ತಿಗಳ ಕುಮ್ಮಕ್ಕು ಇದ್ದಂತಿದೆ

-ಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲ ಸಂಗಮ ಪಂಚಮಸಾಲಿ ಪೀಠ

ಲಿಂಗಾಯತ ಧರ್ಮದ ಹೋರಾಟ ಹಿಂದೂ ಧರ್ಮದ ವಿರೋಧಿ ಅಲ್ಲ. ರಾಜಕೀಯ ದೂಳಿನಿಂದ ಈ ಬೆಳಕನ್ನು ಹೊಸಕಿಹಾಕಲು ಸಾಧ್ಯವಿಲ್ಲ

-ಶಿವರುದ್ರ ಸ್ವಾಮೀಜಿ ಬೇಲಿಮಠ

***

ಸಚಿವರು ಲಿಂಗಾಯತರ ಕ್ಷಮೆಯಾಚಿಸಲಿ

ಬೀದರ್‌: ‘ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಕ್ಷಣ ಲಿಂಗಾಯತರ ಕ್ಷಮೆಯಾಚಿಸಬೇಕು’ ಎಂದು ಬೀದರ್‌ ಜಿಲ್ಲೆಯ ಮಠಾಧೀಶರು ಆಗ್ರಹಿಸಿದರು.‘ಡಿಕೆಶಿ ಕ್ಷಮೆಯಾಚಿಸದಿದ್ದರೆ ಲಿಂಗಾಯತರಿಗೆ ಪ್ರತಿಭಟನೆಯ ಹಾದಿ ತುಳಿಯುವುದು ಅನಿವಾರ್ಯವಾಗಲಿದೆ’ ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು, ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ, ಕೌಠಾದ ಬಸವ ಯೋಗಾಶ್ರಮದ ಸಿದ್ಧರಾಮ ಬೆಲ್ದಾಳ ಶರಣರು, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹಾಗೂ ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಸಚಿವರ ಹೇಳಿಕೆ ಹಿಂದೆ ಷಡ್ಯಂತ್ರ’

‘ಲಿಂಗಾಯತ ಧರ್ಮ ಕುರಿತು ಸಿದ್ದರಾಮಯ್ಯನವರ ಸರ್ಕಾರ ಕೈಗೊಂಡಿದ್ದ ತೀರ್ಮಾನದಲ್ಲಿ ಭಾಗಿಯಾಗಿದ್ದ ಸಚಿವ ಶಿವಕುಮಾರ್‌ ಈಗ ಆಕ್ಷೇಪ ಎತ್ತಿರುವುದರ ಹಿಂದೆ ಷಡ್ಯಂತ್ರ ಇದ್ದಂತಿದೆ’ ಎಂದು ಸಂಶಯ ವ್ಯಕ್ತಪಡಿಸಿರುವ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರು, ಸ್ವತಂತ್ರ ಧರ್ಮಕ್ಕಾಗಿನ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರಕಟಿಸಿದ್ದಾರೆ.

‘ಶಿವಕುಮಾರ್‌ ಹೇಳಿಕೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬೆಂಬಲಿಸಿರುವುದು ನಮ್ಮ ಅನುಮಾನವನ್ನು ಖಚಿತಪಡಿಸುವಂತಿದೆ’ ಎಂದು ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಿಕೆಶಿ ವಿರುದ್ಧ ಪ್ರತಿಭಟನೆ, ಕ್ಷೀರಾಭಿಷೇಕ

ಕಲಬುರ್ಗಿ: ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ಕುರಿತು ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಖಂಡಿಸಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದವರು ನಗರದಲ್ಲಿ ಪ್ರತಿಭಟನೆ ಮಾಡಿದರು.

‘ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಅನೇಕ ಹಗರಣಗಳಲ್ಲಿ ಸಿಲುಕಿಕೊಂಡಿರುವ ಸಚಿವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು’ ಎಂದು ಎಚ್ಚರಿಕೆ ನೀಡಿದರು.

ಇನ್ನೊಂದೆಡೆಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ಸ್ವಾಗತಿಸಿ ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದವರು ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ನೇತೃತ್ವದಲ್ಲಿ ಡಿಕೆಶಿ ಚಿತ್ರವಿರುವ ಫ್ಲೆಕ್ಸ್‌ಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದರು.

‘ಶಾಮನೂರು ಬೆದರಿಕೆಗೆ ಬಗ್ಗಲ್ಲ’

ವಿಜಯಪುರ: ‘ಹೈಕಮಾಂಡ್‌ಗೆ ದೂರು ಕೊಡುತ್ತೇನೆ ಎಂದು ಹೇಳಿರುವ ಶಾಮನೂರು ಶಿವಶಂಕರಪ್ಪ ಬೆದರಿಕೆಗೆ ಬಗ್ಗುವವನು ನಾನಲ್ಲ’ ಎಂದು ಶಾಸಕ ಎಂ.ಬಿ.ಪಾಟೀಲ ಗುಡುಗಿದರು.

‘ನನ್ನ ವಿರುದ್ಧ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬಂದರೂ ನಾ ಗೆದ್ದಿರುವೆ. ವಿನಯ ಕುಲಕರ್ಣಿ ಸೋಲಿಗೆ ಬೇರೆ ಕಾರಣಗಳಿವೆ. ನಿಮ್ಮ ಪುತ್ರನು ಸೋತಿದ್ದಾರಲ್ಲ. ಅದು ಏಕೆ? ನಾವು ಧರ್ಮ ಒಡೆದವರು ಸೋತಿದ್ದೇವೆ. ನೀವು ಒಟ್ಟುಗೂಡಿಸಲು ಶ್ರಮಿಸಿದವರು. ಆದರೂ ಏಕೆ ಸೋತಿರಿ’ ಎಂದು ಗೇಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.