ADVERTISEMENT

ಆರೆಸ್ಸೆಸ್‌, ಬಿಜೆಪಿ ಸಂವಿಧಾನ ವಿರೋಧಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:11 IST
Last Updated 27 ಜೂನ್ 2025, 16:11 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಸಂವಿಧಾನ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ಕಿತ್ತು ಹಾಕಬೇಕೆಂದು ಆರೆಸ್ಸೆಸ್‌ನ ದತ್ತಾತ್ರೇಯ ಹೊಸಬಾಳೆ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಭಿಪ್ರಾಯವನ್ನು ದೇಶದ ಮುಂದಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತ ಸಮಾಜವಾದ ಮತ್ತು ಜಾತ್ಯತೀತ ದೇಶ ಎಂದು ಎಲ್ಲರೂ ಅರ್ಥ ಮಾಡಿಕೊಂಡಿದ್ದ ಕಾರಣ ಸಂವಿಧಾನದ ಮೂಲಪೀಠಿಕೆಯಲ್ಲಿ ಈ ಪದಗಳನ್ನು ಆ ದಿನಗಳಲ್ಲಿ ಸೇರಿಸಿರಲಿಲ್ಲ. ನಂತರ ದಿನಗಳಲ್ಲಿ ಜಾತ್ಯತೀತತೆ ಮತ್ತು ಸಮಾಜವಾದದ ಮೇಲೆ ಆರ್‌ಎಸ್‌ಎಸ್‌ ಮತ್ತು ಜನಸಂಘಗಳು ದಾಳಿ ಮಾಡಲು ಶುರು ಮಾಡಿದಾಗ ಇಂದಿರಾಗಾಂಧಿಯವರು 42ನೇ ತಿದ್ದುಪಡಿ ಮೂಲಕ ಈ ಪದಗಳನ್ನು ಸೇರಿಸಿದರು ಎಂದು ಹೇಳಿದ್ದಾರೆ.

‘ಸಂವಿಧಾನವನ್ನು ಆರೆಸ್ಸೆಸ್‌ ವಿರೋಧಿಸುತ್ತಿರುವುದು ಹೊಸ ಬೆಳವಣಿಗೆಯೇನಲ್ಲ. ಬಿಜೆಪಿ ಮತ್ತು ಆರೆಸ್ಸೆಸ್‌ ಸಂವಿಧಾನವನ್ನು ಅದರ ರಚನೆಯ ದಿನದಿಂದಲೇ ವಿರೋಧಿಸುತ್ತಾ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದ ನಾಲ್ಕೇ ದಿನಕ್ಕೆ ಅದನ್ನು ವಿರೋಧಿಸಿ ಆರೆಸ್ಸೆಸ್‌ ಮುಖವಾಣಿ ಆರ್ಗನೈಸರ್‌ ಪತ್ರಿಕೆ ಸಂಪಾದಕೀಯ ಬರೆದಿತ್ತು. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಭಾರತೀಯತೆಯಾಗಲಿ, ಪುರಾತನ ಭಾರತದ ಕಟ್ಟುಕಟ್ಟಳೆಗಳಾಗಲಿ ಇಲ್ಲ. ಇದು ಸಂವಿಧಾನದ ಕೆಟ್ಟ ವಿಚಾರ’ ಎಂದು ಹೇಳಿತ್ತು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ADVERTISEMENT

ಸಂವಿಧಾನದ ಬಗ್ಗೆ ಆರೆಸ್ಸೆಸ್‌ ಮತ್ತು ಅದರ ನಾಯಕರು ಬಹಿರಂಗವಾಗಿ ವ್ಯಕ್ತಪಡಿಸಿರುವ ಈ ಅಭಿಪ್ರಾಯವನ್ನು ಭಾರತೀಯ ಜನತಾಪಕ್ಷ ಇಲ್ಲಿಯವರೆಗೆ ತಿರಸ್ಕರಿಸಿಲ್ಲ. ಇದರ ಬದಲಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಒಂದೆಡೆ ಆರೆಸ್ಸೆಸ್‌ನ ನಾಯಕರು ಮತ್ತು ಇನ್ನೊಂದೆಡೆ ಬಿಜೆಪಿಯ ಕೆಳಹಂತದ ನಾಯಕರು ಸಂವಿಧಾನ ಬದಲಾವಣೆಯ ಕೂಗು ಹಾಕುತ್ತಲೇ ಬಂದಿದ್ದಾರೆ. ಬಿಜೆಪಿ ಕಳ್ಳಾಟವನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

‘ಈಗಲೂ ಎಚ್ಚೆತ್ತುಕೊಳ್ಳದೆ ತಮ್ಮ ಕುಟಿಲ ಪ್ರಯತ್ನವನ್ನು ಹೀಗೆಯೇ ಮುಂದುವರಿಸಿದರೆ ದೇಶದ ಪ್ರಜಾಪ್ರಭುತ್ವ ಪ್ರೇಮಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದಿದ್ದಾರೆ.

‘ನಮ್ಮ ನಡುವಿನ ಒಂದಷ್ಟು ಜಾತ್ಯತೀತ ನಿಲುವಿನ ಪಕ್ಷಗಳು ಅಧಿಕಾರ ಲಾಲಸೆಯಿಂದ ರಾಜಿ ಮಾಡಿಕೊಳ್ಳದೆ ಇದ್ದರೆ ಬಿಜೆಪಿ ಇಂದು ವಿರೋಧಪಕ್ಷದ ಸ್ಥಾನದಲ್ಲಿ ಕೂರಬೇಕಾಗಿತ್ತು. ಇದರ ನಂತರವೂ ಬಿಜೆಪಿ ತನ್ನ ಕುಟಿಲ ಪ್ರಯತ್ನ ಮುಂದುವರಿಸಿದೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

 ಬಿ.ವೈ.ವಿಜಯೇಂದ್ರ 

‘ಮುಸ್ಲಿಂ ಓಲೈಕೆಯೇ ಇವರ ಸಮಾಜವಾದ ಜಾತ್ಯತೀತ’

‘ಸಮಾಜವಾದಿ ಮುಖವಾಡ ಧರಿಸಿ ಜಾತ್ಯತೀತತೆ ಸೋಗಿನಲ್ಲಿ ಮುಸ್ಲಿಂ ಸಮುದಾಯದ ಓಲೈಕೆಯ ರಾಜಕಾರಣ ಮಾಡುತ್ತಿರುವ ನಿಮಗೆ ಸಂವಿಧಾನದ ಆಶಯ ಮತ್ತು ಮೌಲ್ಯಗಳ ಕುರಿತು ಮಾತನಾಡುವ ನೈತಿಕ ಹಕ್ಕು ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿರುವ ಅವರು ‘ಸಂವಿಧಾನವನ್ನು ಹತ್ಯೆ ಮಾಡಿ ಪ್ರಜಾಪ್ರಭುತ್ವವನ್ನು ಮೆಟ್ಟಿ ನಿಂತು ಸರ್ವಾಧಿಕಾರಿ ಆಡಳಿತ ನಡೆಸಿದ ಕಾಂಗ್ರೆಸ್‌ ತಾನು ಮಾಡಿದ ಪ್ರಜಾಪ್ರಭುತ್ವದ ಕಗ್ಗೊಲೆ ಕುರಿತು ಈವರೆಗೂ ಕ್ಷಮೆ ಕೇಳಿಲ್ಲ. ಕನಿಷ್ಠ ಪಶ್ಚಾತಾಪವನ್ನೂ ವ್ಯಕ್ತಪಡಿಸಿಲ್ಲ’ ಎಂದಿದ್ದಾರೆ. ‘ಇಂತಹ ಸಂವಿಧಾನ ವಿರೋಧಿ ಪಕ್ಷದ ನೆರಳು ಆಶ್ರಯಿಸಿ ಅಧಿಕಾರ ಅನುಭವಿಸುವ ಹಪಾಹಪಿತನದಿಂದ ನೈತಿಕತೆಯನ್ನು ಮೂಲೆಗೊತ್ತಿ ಅಧಿಕಾರಕ್ಕೆ ಅಂಟಿ ಕುಳಿತಿರುವ ನೀವು ಯಾವ ಮುಖ ಹೊತ್ತು ಆರೆಸ್ಸೆಸ್‌ ಟೀಕಿಸುತ್ತಿದ್ದೀರಿ’ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

‘ಜಾತ್ಯತೀತವಾದ ಸಮಾಜವಾದ ಎಂಬ ಪದಗಳು ನಿಮ್ಮ ಹಾಗೂ ಕಾಂಗ್ರೆಸ್‌ ಪಕ್ಷದ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಮತ್ತು ಮತಬ್ಯಾಂಕ್‌ ರಾಜಕಾರಣಕ್ಕೆ ಬಳಕೆಯಾಗುತ್ತಿರುವುದು ನಾಡಿನ ಮತ್ತು ದೇಶದ ದೌರ್ಭಾಗ್ಯ. ಜಾತ್ಯತೀತ ಮತ್ತು ಸಮಾಜವಾದ ಎಂಬುದು ಡೋಂಗೀವಾದ ಎಂಬುದು ಜನರಿಗೆ ಸ್ಪಷ್ಟವಾಗಿ ಮನವರಿಕೆಯಾಗಿದೆ’ ಎಂದು ಹೇಳಿದ್ದಾರೆ. ‘ಅಖಂಡ ಭಾರತ ನಿರ್ಮಾಣದ ಸಂಕಲ್ಪ ತೊಟ್ಟು ಜಾತಿ ರಹಿತ ಧರ್ಮ ಕಟ್ಟುವ ಮೌಲ್ಯ ಅಳವಡಿಸಿಕೊಂಡಿರುವ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ ಬೃಹತ್ ವೃಕ್ಷದಂತೆ ಬೆಳೆದು ನಿಂತಿರುವ ಆರೆಸ್ಸೆಸ್‌ ಕುರಿತು ಟೀಕಿಸುವ ಮೊದಲು ನಿಮ್ಮನ್ನು ನೀವು ಆತ್ಮ ವಿಮರ್ಶೆ ಮಾಡಿಕೊಳ್ಳಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.