ADVERTISEMENT

ಪ್ರದೀಪ್‌ ಆತ್ಮಹತ್ಯೆ: ಯಾರೇ ತಪ್ಪು ಮಾಡಿದ್ದರೂ ಬಂಧಿಸಿ- ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 9:12 IST
Last Updated 3 ಜನವರಿ 2023, 9:12 IST
   

ಬೆಂಗಳೂರು: ‘ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿ, ಕಗ್ಗಲೀಪುರದ ಪ್ರದೀಪ್ ಅವರ ಸಾವಿಗೆ ಕಾರಣರಾದರ ಮೇಲೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಬಂಧಿಸಿ ಕಾನೂನು ಪ್ರಕಾರ ತೆಗೆದುಕೊಳ್ಳಬೇಕು. ಇಲ್ಲದೇ ಇದ್ದರೆ ಸಾಕ್ಷ್ಯ ನಾಶ ಮಾಡಬಹುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಜೊತೆ ಪ್ರದೀಪ್‌ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಅವರು ಮಾತನಾಡಿದರು.

‘ಪ್ರದೀಪ್‌ ಅವರ ಮನೆಯವರ ಮೊಬೈಲ್‌ನ್ನು ಪೊಲೀಸರು ಕೇಳ್ತಿದ್ದಾರಂತೆ. ಹೀಗೆಲ್ಲ ಮಾಡುವುದು ಸರಿಯಲ್ಲ. ಗುತ್ತಿಗೆದಾರ ಸಂತೋಷ್ ‌ಪಾಟೀಲ್ ನನ್ನ ಸಾವಿಗೆ ಈಶ್ವರಪ್ಪ ಕಾರಣ ಅಂತ ಹೇಳಿದ್ದರು. ಆದರೆ, ಮೂರೇ ತಿಂಗಳಲ್ಲಿ ಪೊಲೀಸರು ‘ಬಿ’ ರಿಪೋರ್ಟ್ ಕೊಟ್ಟರು. ಇದೇ ಪರಿಸ್ಥಿತಿ ಈ ಪ್ರಕರಣದಲ್ಲಿ ಆಗಬಾರದು’ ಎಂದರು.

ADVERTISEMENT

‘ಈ ಸರ್ಕಾರದಲ್ಲಿ ಅನೇಕ ಜನ ಸಾಯುವುದು, ದಯಾ ಮರಣ ಕೋರುವುದು ನಡೆಯುತ್ತಿದೆ. ಇದಕ್ಕೆ ಭ್ರಷ್ಟಾಚಾರ ಕಾರಣ. ಭ್ರಷ್ಟಾಚಾರದ ವಿರುದ್ದ ಕ್ರಮ ಆಗದೆ ಇರುವುದರಿಂದ ಹೀಗೆ ಆಗುತ್ತಿದೆ. ಈ ಪ್ರಕರಣದಲ್ಲಿ ಪ್ರದೀಪ್ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಬೇಕು’ ಎಂದರು.

‘ಪ್ರದೀಪ್‌ ಅವರ ಆತ್ಮಹತ್ಯೆ ನಡೆಯಬಾರದ ಘಟನೆ. ಹಣಕಾಸಿನ ವ್ಯವಹಾರದಲ್ಲಿ ಈ ಘಟನೆ ಆಗಿದೆ. ನ್ಯಾಯ ಕೊಡಿಸುವಂತೆ ಪ್ರದೀಪ್ ಪತ್ನ ಕೇಳಿದ್ದಾರೆ. ₹ 1.5 ಕೋಟಿ ನಾವು ಬಂಡವಾಳ ಹಾಕಿದ್ದೇವೆ. ಒಂದೇ ಒಂದು ಪೈಸೆ ಲಾಭ ಬಂದಿಲ್ಲ. ನಮ್ಮ ಹಣ ವಾಪಸ್ ಕೊಡಿ ಎನ್ನುವುದು ಪ್ರದೀಪ್‌ ಪತ್ನಿಯಯ ವಾದ. ಅರವಿಂದ ಲಿಂಬಾವಳಿ ಈ ಭಾಗದ ಶಾಸಕರು. ಸೆಟ್ಲಮೆಂಟ್‌ ಮಾಡಿದ್ದಾರೆ. ಪ್ರದೀಪ್‌ ಮರಣಪತ್ರದಲ್ಲಿ ಲಿಂಬಾವಳಿ ಹೆಸರೂ ಸೇರಿ ಆರು ಜನರ ಹೆಸರಿದೆ. ಈಗಾಗಲೇ ಎಫ್‌ಐಆರ್‌ ಆಗಿದೆ. ಪೊಲೀಸರು ಹಣ ವಾಪಸ್ ಕೊಡಿಸಬೇಕು. ಕೂಡಲೇ ಎಲ್ಲ‌ರನ್ನೂ ಬಂಧಿಸಬೇಕು’ ಎಂದು ಆಗ್ರಹಿಸಿದರು.

ಸುರ್ಜೆವಾಲಾ ಮಾತನಾಡಿ, ‘ಪ್ರದೀಪ್ ಅತಿರೇಕದ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂತೋಷ್ ಪಾಟೀಲ್, ಪ್ರದೀಪ್, ಪ್ರಸಾದ್ ಇವೆಲ್ಲ ಕೇವಲ ಹೆಸರುಗಳಲ್ಲ. ಭ್ರಷ್ಟ ಸರ್ಕಾರದಿಂದ ಆಗುತ್ತಿರುವ ಸಾವುಗಳು. ಶೇ 40 ಕಮಿಷನ್‌ನಿಂದಾಗಿ ರಾಜ್ಯದಲ್ಲಿ ಜೀವದ ಮೇಲೆ ಜೀವ ಬಲಿಯಾಗುತ್ತಿದೆ’ ಎಂದರು.

‘ಸಂತೋಷ್ ಪಾಟೀಲ್ ಕೂಡ ಬಿಜೆಪಿ ನಾಯಕ ಆಗಿದ್ದ. ಅವನಿಗೂ ಹಣಕಾಸಿನ ಸಮಸ್ಯೆ ಆಗಿತ್ತು. ತುಮಕೂರಿನ ಪ್ರಸಾದ್ ಸಾವಿಗೂ ಹಣಕಾಸಿನ ಸಮಸ್ಯೆಯೇ ಕಾರಣವಾಗಿತ್ತು. ಹಣಕಾಸಿನ ವ್ಯವಹಾರಗಳಲ್ಲಿ ಬಿಜೆಪಿ ನಾಯಕರು ಯಾಕೆ ತಲೆ ಹಾಕುತ್ತಿದ್ದಾರೆ? ಪ್ರದೀಪ್ ಸಾವು ಆತ್ಮ ಹತ್ಯೆ ಅಲ್ಲ, ಅದೊಂದು ಕೊಲೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರದೀಪ್‌ ಅವರ ಮಗಳ, ಪತ್ನಿಯ ಕಣ್ಣೀರು ಒರೆಸಲು ಸರ್ಕಾರದ ಕೈಯಲ್ಲಿ ಸಾಧ್ಯ ಇದೆಯೇ? ಭ್ರಷ್ಟಾಚಾರದಿಂದಾಗಿಯೇ ಇದೆಲ್ಲ ಆಗುತ್ತಿದೆ. ಪ್ರದೀಪ್ ಕೊಲೆಗೆ ಕಾರಣರಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು.‌ ಅವರನ್ನು ಬಂಧಿಸಿ, ಕಂಬಿ ಹಿಂದೆ ಕಳಿಸಬೇಕು‘ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.