ADVERTISEMENT

ದಾಖಲೆ ಮುರಿಯುತ್ತಿದ್ದೇನೆ, ಅರಸುಗೂ ನನಗೂ ಹೋಲಿಕೆ ಇಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 8:15 IST
Last Updated 5 ಜನವರಿ 2026, 8:15 IST
<div class="paragraphs"><p>ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

   

– ಪ್ರಜಾವಾಣಿ ಚಿತ್ರ

ಮೈಸೂರು: ‘ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರಿಗೂ ನನಗೂ ಹೋಲಿಕೆ ಇಲ್ಲ. ಆದರೆ, ಇಬ್ಬರೂ ಒಂದೇ ಜಿಲ್ಲೆಯಿಂದ ಬಂದವರು. ಅವರು ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಆಡಳಿತ ನಡೆಸಿದ ದಾಖಲೆಯನ್ನು ನಾಳೆ (ಜ.6) ನಾನು ಮುರಿಯುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಎರಡು ದಿನಗಳ ಪ್ರವಾಸಕ್ಕೆಂದು ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಸೋಮವಾರ ಬಂದಿಳಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ನನ್ನ ದಾಖಲೆಯನ್ನು ಮತ್ತೆ ಯಾರೂ ಮುರಿಯುವುದಿಲ್ಲ ಎನ್ನಲಾರೆ. ಸಚಿನ್ ತೆಂಡೂಲ್ಕರ್‌ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಲಿಲ್ಲವೇ? ಹಾಗೆಯೇ ಮುಂದೆ ಯಾರೋ ಬರಬಹುದು, ನಮ್ಮ ದಾಖಲೆ ಮುರಿಯಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸಲೂಬಹುದು’ ಎಂದರು.

‘ದೇವರಾಜ ಅರಸು ಅವರ ಕಾಲದ ರಾಜಕಾರಣವೇ ಬೇರೆ. ಈಗಿನದ್ದೇ ಬೇರೆ. ಎಲ್ಲಾ ಸ್ಥಿತಿಗತಿ ಬೇರೆ. ಅರಸು ಸಮುದಾಯ ಸಂಖ್ಯೆಯಲ್ಲಿ ಮಾತ್ರ ಸಣ್ಣದು. ಆದರೆ, ಸಾಮಾಜಿಕವಾಗಿ ಎತ್ತರದಲ್ಲಿದೆ. ನಾನು ಸಾಮಾಜಿಕವಾಗಿ ತಳ ಸಮುದಾಯದಿಂದ ಬಂದವನು’ ಎಂದು ಹೇಳಿದರು.

‘ನಾನು ದಾಖಲೆ ಮಾಡುವುದು ಬಿಡಿ, ಮಂತ್ರಿ ಅಥವಾ ಮುಖ್ಯಮಂತ್ರಿ ಆಗುತ್ತೇನೆ ಎಂದುಕೊಂಡಿರಲೇ ಇಲ್ಲ. ಶಾಸಕನಾಗಬೇಕು ಎಂದುಕೊಂಡಿದ್ದೆ. ಆ ಕಾಲದಲ್ಲಿ ಜನರು ದುಡ್ಡು ಹಾಕಿ ನನ್ನನ್ನು ಶಾಸಕನನ್ನಾಗಿ ಮಾಡಿದ್ದರು. ಅದೇ ಜನರ ಆಶೀರ್ವಾದದಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ’ ಎಂದರು.

ಸರ್ಕಾರಕ್ಕೆ ಒಂದು ಸಾವಿರ ದಿನದ ಪ್ರಯುಕ್ತ ಸಾಧನಾ ಸಮಾವೇಶ ನಡೆಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಮಾವೇಶ ಮಾಡೋಣ ಎಂದು ಹೇಳಿದ್ದಾರೆ. ಅವರೇ ಅದನ್ನು ನೋಡಿಕೊಳ್ಳುತ್ತಾರೆ’ ಎಂದು ತಿಳಿಸಿದರು.

‘ಬಳ್ಳಾರಿ ಗಲಾಟೆ ವಿಚಾರವನ್ನು ಸಿಐಡಿ ತನಿಖೆಗೆ ವಹಿಸುವ ಬಗ್ಗೆ ಗೃಹ ಸಚಿವ ಪರಮೇಶ್ವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು. ಈಗ ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರ ಕಾರ್ಯದಕ್ಷತೆ ಬಗ್ಗೆ ನಮಗೆ ಅನುಮಾನಗಳಿಲ್ಲ. ತನಿಖೆ ನಡೆಸುವಲ್ಲಿ ಅವರು ನಿಪುಣರಿದ್ದಾರೆ. ಅವರು ವರದಿ ಕೊಟ್ಟ ನಂತರ ನೋಡೋಣ. ನಾಳೆ (ಮಂಗಳವಾರ) ಪರಮೇಶ್ವರ್ ಜೊತೆ ಮಾತನಾಡುವೆ’ ಎಂದರು.

ಮೈಸೂರು ವಿಮಾನನನಿಲ್ದಾಣದ ಸಮೀಪವೇ ಹುಲಿ ಕಾಣಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮೈಸೂರು ಭಾಗದಲ್ಲಿ ಹುಲಿ ಸಂಖ್ಯೆ ಹೆಚ್ಚಳ. ಕಾಡಿನಿಂದ ನಾಡಿಗೆ ಅವು ಬರುತ್ತಿವೆ. ಕೂಡಲೇ ಸೆರೆ ಹಿಡಿಯುವಂತೆ ಸೂಚಿಸಿದ್ದೇನೆ. ಮೈಸೂರು ಭಾಗದಲ್ಲಿನ ಹುಲಿಗಳನ್ನು ಹಿಡಿದು ಬೇರೆ ಕಾಡಿಗೆ ಬಿಡಲು ತಿಳಿಸಿದ್ದೇನೆ’ ಎಂದು ತಿಳಿಸಿದರು.

ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಡಿ.ರವಿಶಂಕರ್‌, ಕೆ.ಹರೀಶ್‌ಗೌಡ, ವಿಧಾನಪರಿಷತ್‌ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಎಂಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ದೊಡ್ಡಸ್ವಾಮಿಗೌಡ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.