ADVERTISEMENT

ಪತ್ರಿಕೆಗೆ ಮುದ್ರಣ ಕಾಗದ ಸುಗಮವಾಗಿ ಲಭ್ಯವಾಗುವಂತೆ ನೀತಿ ರೂಪಿಸಿ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಸಿದ್ದರಾಮಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 8:30 IST
Last Updated 27 ಏಪ್ರಿಲ್ 2022, 8:30 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: 'ಕೇಂದ್ರದ ಸರ್ಕಾರದ ಕೆಲವು ಕ್ರಮಗಳು ಮತ್ತು ನೀತಿಗಳು ಮುದ್ರಣ ಮಾಧ್ಯಮ ನಿರಾತಂಕವಾಗಿ ಮುಂದುವರೆಯಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಹೀಗಾಗಿ ದೇಶೀಯ ಮುದ್ರಣ ಕಾಗದದ ಗುಣಮಟ್ಟ ಹೆಚ್ಚಿಸಲು ಇನ್ಸೆಂಟೀವ್‍ ಕೊಡಬೇಕು. ಜಿಎಸ್‍ಟಿ ಪ್ರಮಾಣ ಇಳಿಸಬೇಕು. ಪತ್ರಿಕಾ ಸಂಸ್ಥೆಗಳಿಗೆ ಮುದ್ರಣ ಕಾಗದ ಸುಗಮ ಮತ್ತು ಸರಳವಾಗಿ ಲಭ್ಯವಾಗುವಂತೆ ನೀತಿ ರೂಪಿಸಬೇಕು' ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

'ಪತ್ರಿಕಾಲಯಗಳು ಕಾಗದದ ಮೇಲೆ ನೀಡಬೇಕಿದ್ದ ತೆರಿಗೆ ಪ್ರಮಾಣ ಈಗ ಶೇ 68 ರಷ್ಟು ಹೆಚ್ಚಿಗೆಯಾಗಿದೆ. ಜಿಎಸ್‍ಟಿ ಜಾರಿಗೆ ಬರುವ ಮುನ್ನ ಮುದ್ರಣ ಕಾಗದದ ಮೇಲೆ ಒಟ್ಟಾರೆ ಶೇ 3ರಷ್ಟು ಮಾತ್ರ ತೆರಿಗೆ ಬೀಳುತ್ತಿತ್ತು. ಆದರೆ, ಜಿಎಸ್‍ಟಿ ಬಳಿಕ ಮುದ್ರಣ ಕಾಗದದ ಮೇಲೆ ಶೇ 5 ರಷ್ಟು ತೆರಿಗೆ ಹೇರಲಾಗಿದೆ. ಆರ್‍ಎನ್‍ಐ ನೋಂದಾಯಿತ ಪತ್ರಿಕಾ ಸಂಸ್ಥೆಗಳಿಗೆ ಶೇ 5ರಷ್ಟು ಜಿಎಸ್‍ಟಿ ನಿಗದಿ ಮಾಡಲಾಗಿದ್ದರೆ, ನೋಂದಾಯಿತವಲ್ಲದ ಸಂಸ್ಥೆಗಳು ಮತ್ತು ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಶೇ 12 ರಷ್ಟು ಜಿಎಸ್‍ಟಿ ನಿಗದಿ ಮಾಡಲಾಗುತ್ತಿದೆ. ಹೀಗಾಗಿ ಪತ್ರಿಕಾ ಸಂಸ್ಥೆಗಳಿಗೆ ಅಗತ್ಯ ಪ್ರಮಾಣದಲ್ಲಿ ಕಾಗದ ದೊರಕುತ್ತಿಲ್ಲ' ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.

'ಸದ್ಯದ ಪರಿಸ್ಥಿತಿಯಿಂದ ಪತ್ರಿಕೆಗಳ ದರ ಹೆಚ್ಚಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜಿಎಸ್‍ಟಿ ಪ್ರಮಾಣ ಹೆಚ್ಚಳದ ಜತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆ, ಮುದ್ರಣ ಕಾಗದಕ್ಕೆ ಬೇಕಾದ ಕಚ್ಛಾ ಪದಾರ್ಥಗಳ ಕೊರತೆ, ಶಿಪ್ಪಿಂಗ್ ಕಂಟೇನರ್ ಗಳ ಕೊರತೆ, ಕಾರ್ಮಿಕರ ಕೊರತೆ, ಕೋವಿಡ್ ಸೃಷ್ಟಿಸಿದ ಪರಿಣಾಮಗಳು ಎಲ್ಲವೂ ಸೇರಿ ಒಂದು ಟನ್ ಮುದ್ರಣ ಕಾಗದವನ್ನು ಆಮದು ಮಾಡಿಕೊಳ್ಳುವ ದರ ಮೊದಲಿದ್ದ ₹ 23,000 ದಿಂದ ₹ 55000-60000 ಕ್ಕೆ ಏರಿಕೆಯಾಗಿದೆ. ಸದ್ಯ ಶೇ 56 ರಷ್ಟು ಮುದ್ರಣ ಕಾಗದ ವಿದೇಶಗಳಿಂದ ಭಾರತಕ್ಕೆ ರಫ್ತಾಗುತ್ತಿದ್ದರೆ ಶೇ 44ರಷ್ಟು ಮಾತ್ರ ದೇಶದ ಒಳಗೆ ಉತ್ಪಾದನೆ ಆಗುತ್ತಿದೆ.ಇವೆಲ್ಲಾ ಕಾರಣಗಳು ಸೇರಿ ಕಳೆದ 2 ವರ್ಷಗಳಲ್ಲಿ ಪತ್ರಿಕೆಗಳ ಮುದ್ರಣ ವೆಚ್ಚ ದುಪ್ಪಟ್ಟಾಗಿದೆ. ಜತೆಗೆ ನಾನಾ ಕಾರಣಗಳಿಂದ ದೇಶದ ವಾಣಿಜ್ಯ-ವಹಿವಾಟು ಕುಂಠಿತಗೊಂಡಿರುವುದು, ಇತರೆ ಉದ್ಯಮ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳ ಕಾರಣದಿಂದ ಪತ್ರಿಕೆಗಳಿಗೆ ಬರುತ್ತಿದ್ದ ಜಾಹಿರಾತು ಪ್ರಮಾಣವೂ ವ್ಯಾಪಕವಾಗಿ ಕುಸಿದಿದೆ. ಕೋವಿಡ್ ಸಾಂಕ್ರಾಮಿಕ-ಲಾಕ್‍ಡೌನ್ ಗಳ ಪರಿಣಾಮ ಪತ್ರಿಕೆಗಳ ಪ್ರಸರಣ ವ್ಯವಸ್ಥೆಯೂ ಹದಗೆಟ್ಟು ಪತ್ರಿಕೆಗಳನ್ನು ನಡೆಸುವುದೇ ದುಸ್ತರವಾಗಿ ಹಲವು ಸಣ್ಣ-ಮಧ್ಯಮ ಮತ್ತು ದೊಡ್ಡ ಸಂಸ್ಥೆಗಳೂ ಆದಾಯ ಕೊರತೆ ಎದುರಿಸಿ ಬಂದ್ ಆಗಿವೆ'ಎಂದಿದ್ದಾರೆ.

ADVERTISEMENT

'ಭಾರತ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದು, ಈ ಪ್ರಜಾತಂತ್ರದ ಮೌಲ್ಯಗಳನ್ನು ರಕ್ಷಿಸುವುದು ಚುನಾಯಿತ ಸರ್ಕಾರದ ಕರ್ತವ್ಯ ಕೂಡ ಆಗಿದೆ. ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಜನರ ಧ್ವನಿಯಾಗಿ ಮಾಧ್ಯಮ ಕ್ಷೇತ್ರ ತನ್ನ ಹೊಣೆಗಾರಿಕೆ ನಿರ್ವಹಿಸುವ ನಾಗರಿಕ ಜವಾಬ್ದಾರಿಯನ್ನು ಮುಂದುವರೆಸುವಂತೆ ನೋಡಿಕೊಳ್ಳಬೇಕಿದೆ' ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.